– ಅನೀಶಾ ನಿಷ್ಠೆಗೆ ಭಾರೀ ಮೆಚ್ಚುಗೆ
ಮಂಗಳೂರು: ದಸರಾ ಅಂದ್ರೆ ಎಲ್ಲರಿಗೂ ಥಟ್ಟಂತ ನೆನಪಿಗೆ ಬರುವುದು ದೇವಿ ಶಾರದಾ ಮಾತೆಯ ವಿಗ್ರಹ. ಪ್ರತಿವರ್ಷ ಮಂಗಳೂರಿನ ದಸರಾದಲ್ಲಿ ನವದುರ್ಗೆಯರ ಜೊತೆ ಶಾರದಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಸರಸ್ವತಿ ದೇವಿಯ ಮೂರ್ತಿ ಅದೆಷ್ಟು ಸುಂದರ ಅಂದ್ರೆ ಅದೇ ರೀತಿಯ ಫೋಟೋ ಶೂಟ್ ಗಳನ್ನು ಸಾಕಷ್ಟು ಯುವತಿಯರು, ಮಹಿಳೆಯರು ಮಾಡಿಸಿಕೊಳ್ಳುತ್ತಾರೆ. ಈ ವರ್ಷದ ವಿಶೇಷ ಅಂದ್ರೆ ಓರ್ವ ಕ್ರಿಶ್ಚಿಯನ್ ಸಮುದಾಯದ ಯುವತಿ, ವೃತಾಚರಣೆ ಮಾಡಿ ಫೋಟೋಶೂಟ್ ಭಾಗವಹಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
Advertisement
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುವ ಕರಾವಳಿಯ ದಸರಾ ಇತರ ಹಲವಾರು ಐತಿಹ್ಯ ಮತ್ತು ವೈಭವಗಳನ್ನು ಹೊಂದಿದೆ. ಇಲ್ಲಿನ ದಸರಾದಲ್ಲಿ ಹುಲಿವೇಷ ಸೇರಿದಂತೆ ಸಾಕಷ್ಟು ಟ್ಯಾಬ್ಲೋಗಳ ಮೂಲಕ ಪ್ರತಿವರ್ಷ ಜನರನ್ನು ರಂಜಿಸುವ ಕಾರ್ಯಕ್ರಮಗಳು ಇರುತ್ತಿತ್ತು. ಜೊತೆಗೆ ಲಕ್ಷಾಂತರ ಜನರು ಈ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ವರ್ಷ ಕೊರೊನಾದಿಂದಾಗಿ ಸರಳ ದಸರಾ ಆಚರಿಸಿದ್ದರಿಂದ ಎಲ್ಲಾ ಸಂಭ್ರಮಗಳಿಗೆ ಕೊಂಚ ಬ್ರೇಕ್ ಬಿದ್ದಿತ್ತು.
Advertisement
Advertisement
ದಸರಾದಲ್ಲಿ ಪ್ರಮುಖ ಭಾಗ ಅಂದರೆ ಅದು ಗಣಪತಿ, ಆದಿಶಕ್ತಿ, ನವದುರ್ಗೆಯರು ಮತ್ತು ಸರಸ್ವತಿ ಮೂರ್ತಿ. ಕುದ್ರೋಳಿ ದೇವಸ್ಥಾನದ ಆವರಣದಲ್ಲಿರುವ ಸಭಾಭವನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳು ಅದೆಷ್ಟು ಸುಂದರ ಮತ್ತು ಮನಮೋಹಕ ಅಂದರೆ ಅದನ್ನು ನೋಡಿದವರು ವಾವ್ ಅನ್ನದೇ ಇರಲಾರರು. ಪ್ರಮುಖವಾಗಿ ಶಾರದಾ ಮಾತೆಯ ವಿಗ್ರಹ ಅತ್ಯಕರ್ಷಣೆಯಾಗಿರುತ್ತದೆ. ಪ್ರತಿವರ್ಷ ವರ್ಷಕ್ಕೂ ಕೊಂಚ ವಿಭಿನ್ನ ಶೈಲಿಯಲ್ಲಿ ಮೂಡಿಬರುವ ಶಾರದಾ ಮಾತೆಯ ಮೂರ್ತಿ ಸಾಕ್ಷಾತ್ ಸರಸ್ವತಿಯೇ ಧರೆಗಿಳಿದುಬಂದಂತೆ ಕಾಣುತ್ತಿತ್ತು. ಇದಷ್ಟು ಫೇಮಸ್ ಆಗಿದೆ ಅಂದ್ರೆ ಇದೇ ರೀತಿಯ ವೇಷ ಧರಿಸಿ ಫೋಟೊಶೂಟ್ ನ್ನು ಯುವತಿಯರು ಮತ್ತು ಮಹಿಳೆಯರು ಮಾಡಿಸಿಕೊಳ್ಳುತ್ತಿದ್ದಾರೆ.
Advertisement
ದೇವಿಯ ಮುಡಿಯಲ್ಲಿ ಯಾವ ರೀತಿ ಮಲ್ಲಿಗೆ ಗುಚ್ಚ, ಕೈಯಲ್ಲಿನ ವೀಣೆ ಇದ್ದಂತೆ ಥೇಟ್ ಮೂರ್ತಿಯ ಹಾಗೆ ಅಲಂಕಾರ ಮಾಡಿಕೊಂಡು ಫೋಟೊಗೆ ಪೋಸ್ ಕೊಡುತ್ತಾರೆ. ದೇವಿಯ ಫೋಟೋ ಹೆಚ್ಚು ವೈರಲ್ ಆಗೋದು ವಿಸರ್ಜನೆಯ ಫೋಟೊಗಳಿಂದಾಗಿ. ವಿಸರ್ಜನೆ ವೇಳೆ ಸರಸ್ವತಿ ಮೂರ್ತಿ ಮುಳುಗುವಾಗ ಕ್ಲಿಕ್ ಮಾಡಿದ ಫೋಟೋ ಮಾದರಿಯಲ್ಲಿ ಯುವತಿಯರು ಮತ್ತು ಮಹಿಳೆಯರು ನೀರಿನಲ್ಲಿ ಮುಳುಗಿ ಫೋಟೊಗೆ ಪೋಸ್ ನೀಡುತ್ತಾರೆ.
ಈ ಬಾರಿ ಮಂಗಳೂರಿನ ಪಾತ್ ವೇ ಮತ್ತು ಮರ್ಸಿ ಸಲೂನ್ ಆಯೋಜಿಸಿದ್ದ ಶ್ಯಾಡೋ ಆಫ್ ನವದುರ್ಗಕ್ಕೆ ರೂಪದರ್ಶಿಯರನ್ನು ಹುಡುಕುತ್ತಿದ್ದರು. ಆಗ ಸರಸ್ಪತಿ ಮೂರ್ತಿಯ ರೂಪದರ್ಶಿಯಾಗಿ ಮಂಗಳೂರಿನ ಕುಲಶೇಖರ ನಿವಾಸಿಯಾದ ಅನೀಶಾ ಅಂಜಲಿನ್ ಮೋಂತೇರೊ ಸೆಲೆಕ್ಟ್ ಆಗಿದ್ರು. ತನ್ನ ಧರ್ಮವಲ್ಲದ ಇಲ್ಲಿ ಈ ಕಾರ್ಯ ಮಾಡಲು ಆಕೆ ನಿಷ್ಠೆಯಿಂದ ತಯಾರಾಗಿದ್ದರು. 21 ದಿನ ಕಾಲ ಕಠಿಣ ವ್ರತ ಮಾಡಿ ಮಾಂಸಹಾರ ವರ್ಜಿಸಿದ್ದರು. ಹೀಗೆ ಸಂಪೂರ್ಣ ಸಸ್ಯಹಾರ ಅದರಲ್ಲೂ ಪಥ್ಯಹಾರ ಸೇವಿಸಿ ನಂತರ ಈ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಫೋಟೊಗಳನ್ನು ವರ್ಷಿಲ್ ಅಂಚನ್ ಸೆರೆಹಿಡಿದ್ದಾರೆ. ಇದೇ ರೀತಿ ಫೋಟೊಶೂಟ್ ಮಾಡಿದ್ದ ಹಲವು ಯುವತಿಯರು ಭಕ್ತವೃಂದದಿಂದ ಟೀಕೆಗೆ ಗುರಿಯಾಗಿದ್ದರು. ಆದರೆ ಅನೀಶಾಳ ಈ ವ್ರತ ನಿಷ್ಠೆಯಿಂದ ಈಗ ಎಲ್ಲರ ಮೆಚ್ಚುಗೆಗೆ ಇದು ಕಾರಣವಾಗಿದೆ.