ಶಿವಮೊಗ್ಗ: ದೇಶಾದ್ಯಂತ ರಾಮಮಂದಿರ ನಿರ್ಮಾಣಕ್ಕೆ ಭಕ್ತರು ಸ್ವಯಂಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ. ಆದರೆ ರಾಮಮಂದಿರ ನಿರ್ಮಾಣಕ್ಕೆ ವಿರೋಧ ಮಾಡುವವರು ಸುಪ್ರೀಂಕೋರ್ಟ್ ನ ತೀರ್ಪನ್ನೇ ಪ್ರಶ್ನಿಸಿದ್ದಂತೆ. ಹೀಗಾಗಿ ಅಂತಹವರು ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
Advertisement
ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಹಣ ನೀಡಿ ಎಂದು ಯಾರನ್ನೂ ಒತ್ತಾಯ ಮಾಡಿಲ್ಲ. ಜನರೇ ಸ್ವಯಂಪ್ರೇರಿತರಾಗಿ ದೇಣಿಗೆ ಸಮರ್ಪಿಸುತ್ತಿದ್ದಾರೆ. ಅಲ್ಲದೇ ಇಂದು ಕೈಗಾರಿಕೋದ್ಯಮಿಗಳು ಮಂದಿರ ನಿರ್ಮಾಣಕ್ಕೆ 70 ಲಕ್ಷ ರೂ ನೀಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಲೇಬೇಕು ಎಂದು ಜನರು ಹಣ ನೀಡುತ್ತಿರುವುದು ಶ್ಲಾಘನೀಯ ಎಂದರು.
Advertisement
Advertisement
ದೇಣಿಗೆ ಸಂಗ್ರಹ ಮಾಡುತ್ತಿರುವವರು ಯಾರಿಗೂ ಬಲವಂತ ಮಾಡಿ ಹಣ ನೀಡಿ ಎಂದು ಕೇಳಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಯಾರ ಮನೆಗೆ ಹೋದರು ಸ್ವಯಂಪ್ರೇರಿತರಾಗಿ ಹಣ ನೀಡುತ್ತಿದ್ದಾರೆ. ಇದನ್ನು ಟೀಕೆ ಮಾಡುವ ಮೂಲಕ ಅನಗತ್ಯವಾಗಿ ಗೊಂದಲವನ್ನು ಸೃಷ್ಟಿಸಬಾರದು. ನಿಮಗೆ ಇಷ್ಟವಿದ್ದರೆ ಹಣ ನೀಡಿ, ಇಲ್ಲವಾದರೆ ಬೇಡ. ಬೇರೆಯವರು ಹಣ ಕೊಡುವುದಕ್ಕೆ ಕಲ್ಲು ಹಾಕಬೇಡಿ. ಟೀಕೆ ಮಾಡುವವರು ಮೊದಲು ಇದನ್ನು ತಿಳಿದುಕೊಳ್ಳಬೇಕು. ನಾನು ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ ಹಣ ನೀಡಲ್ಲ, ನಮ್ಮೂರಿನ ರಾಮ ಮಂದಿರಕ್ಕೆ ನೀಡುತ್ತೇನೆ ಎನ್ನುವವರು ಗಮನಿಸಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಸಿಎಂ ಟಾಂಗ್ ನೀಡಿದರು.