Connect with us

Crime

ಮಗನ ಮಣಿಕಟ್ಟು ಸೀಳಿ ಮಹಡಿ ಮೇಲಿಂದ ಜಿಗಿದು ಪ್ರಾಣ ಬಿಟ್ಟ ತಾಯಿ

Published

on

– 3 ವರ್ಷದ ಮಗನಿಗಾಗಿ 20 ಲಕ್ಷ ಖರ್ಚು ಮಾಡಿದ್ದ ದಂಪತಿ

ಹೈದರಾಬಾದ್: ತನ್ನ ಮೂರು ವರ್ಷದ ಮಗನ ಮಣಿಕಟ್ಟನ್ನು ಸೀಳಿ ತಾಯಿಯೊಬ್ಬಳು ಮನೆಯ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನ ಎಲ್‍ಬಿ ನಗರದಲ್ಲಿ ನಡೆದಿದೆ.

ಮೃತ ತಾಯಿಯನ್ನು 26 ವರ್ಷದ ಜಿ.ಮಮತಾ ಎಂದು ಗುರುತಿಸಲಾಗಿದೆ. ಮಮತಾ ತನ್ನ ಮೂರು ವರ್ಷದ ಮಗ ರಿಯಾನ್ಶ್‍ನ ಮಣಿಕಟ್ಟನ್ನು ಸೀಳಿ ತನ್ನ ಮನೆಯ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಬ್ಯಾಟರಿ ಮಾರಾಟಗಾರನಾಗಿದ್ದ ಪತಿ ಶಂಕರಯ್ಯ ಕೆಲಸ ಮುಗಿಸಿ ಮನಗೆ ಬಂದು ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಕೆಲಸ ಮುಗಿಸಿ ಮನೆಗೆ ಬಂದ ಶಂಕರಯ್ಯನಿಗೆ ಮಗು ರೂಮಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಇದರಿಂದ ಗಾಬರಿಗೊಂಡ ಶಂಕರಯ್ಯ ಮನೆಯಲ್ಲಿ ಪತ್ನಿಯನ್ನು ಹುಡುಕಿದ್ದಾರೆ. ಆದರೆ ಆಕೆ ಮನೆಯಲ್ಲಿ ಕಾಣಿಸಿಲ್ಲ. ನಂತರ ಶಂಕರಯ್ಯ ಮಗನನ್ನು ಕರೆದುಕೊಂಡು ಹತ್ತಿರದ ಆಸ್ಪತ್ರೆ ಹೋಗಿದ್ದಾರೆ. ಜೊತೆಗೆ ತನ್ನ ಪತ್ನಿ ಮಮತಾ ಮನೆಯಲ್ಲಿ ಕಾಣಿಸುತ್ತಿಲ್ಲ. ಆಕೆಯನ್ನು ಮನೆಗೆ ಹೋಗಿ ನೋಡು ನಾನು ಆಸ್ಪತ್ರೆಯಲ್ಲಿದ್ದೇನೆ ಎಂದು ತನ್ನ ಸ್ನೇಹಿತ ವಿಕಾಸ್ ಗೌಡನಿಗೆ ಹೇಳಿದ್ದಾನೆ.

ಶಂಕರಯ್ಯ ಹೇಳಿದಂತೆ ಮನೆಗೆ ಬಂದ ವಿಕಾಸ್ ಗೌಡ ಮಮತಾಳನ್ನು ಹುಡುಕಿದ್ದಾನೆ. ಆದರೆ ಆಕೆ ಮನೆಯಲ್ಲಿ ಎಲ್ಲೂ ಕಾಣಿಸಿಲ್ಲ. ನಂತರ ಮನೆಗೆ ಬಂದ ಶಂಕರಯ್ಯ ಮಹಡಿ ಮೇಲೆ ಹೋಗಿ ನೋಡಿದ್ದಾನೆ. ಅಲ್ಲಿ ಟ್ಯಾಂಕ್ ಪಕ್ಕದಲ್ಲಿ ಮಮತಾ ಕುಳಿತಿರುವುದು ಕಂಡು ಬಂದಿದೆ. ಅವಳನ್ನು ಹೋಗಿ ಮಾತನಾಡಿಸಿದ್ದಾನೆ. ಆದರೆ ಶಂಕರಯ್ಯನನ್ನು ಕಂಡು ಹೆದರಿದ ಮಮತಾ ಅವನು ಹತ್ತಿರ ಹೋಗುತ್ತಿದ್ದಂತೆ ಮನೆಯ ಮಹಡಿ ಮೇಲಿನಿಂದ ಜಿಗಿದಿದ್ದಾಳೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇತ್ತ ಮಗುವು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಎಲ್‍ಬಿ ನಗರದ ಇನ್ಸ್‌ಪೆಕ್ಟರ್‌ ಅಶೋಕ್ ರೆಡ್ಡಿ, ಶಂಕರಯ್ಯ ದಂಪತಿಯ ಮಗುವಿಗೆ ದೃಷ್ಟಿ ದೋಷವಿದ್ದು, ಅವರು ಮಗು ಸರಿಹೋಗಲಿ ಎಂದು 20 ಲಕ್ಷ ಖರ್ಚು ಮಾಡಿದ್ದರು. ಜೊತೆಗೆ ಮಗುವಿಗೆ ಮಾನಸಿಕ ತೊಂದರೆ ಇತ್ತು. ಇದರಿಂದ ಮಮತಾ ಕುಟುಂಬಸ್ಥರು ಆಕೆಯನ್ನು ಹೀಯಾಳಿಸುತ್ತಿದ್ದರು. ಇದರಿಂದ ಬೇಸತ್ತ ಮಮತಾ ಈ ರೀತಿ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *