ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಚಿಕಿತ್ಸೆಗೆ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಅವರುಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು. ಉತ್ತಮ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವೆನ್ ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬೆಡ್ಗಳ ವ್ಯವಸ್ಥೆ ಮಾಡುವ ಕುರಿತು ಪರಿಶೀಲಿಸಿ ನಂತರ ಆರೋಗ್ಯ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರುಗಳು, ತಜ್ಞ ವೈದ್ಯರುಗಳು ಹಾಗೂ ಶುಶ್ರೂಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾಗಬಾರದು. ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸೇವೆಗೆ ನಿಯೋಜಿಸುವುದರಿಂದ ಅಗತ್ಯ ಚಿಕಿತ್ಸೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದರು.
Advertisement
Advertisement
ಸಾಮಾನ್ಯ ರೋಗ ಲಕ್ಷಣಗಳಿರುವ ವ್ಯಕ್ತಿಗಳನ್ನು ನಗರದ ಕದ್ರಿಯಲ್ಲಿರುವ ಇ.ಎಸ್.ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈರಾಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರದ ಸಿಬ್ಬಂದಿಯನ್ನ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ ಕೋವಿಡ್ ಪರೀಕ್ಷೆಯ ವರದಿಗಳನ್ನು ವಿಳಂಬವಿಲ್ಲದೇ ನೀಡಬೇಕು ಎಂದು ಕೂಡ ತಿಳಿಸಿದರು.
Advertisement
ಆಸ್ಪತ್ರೆಯಲ್ಲಿ ಕೋವಿಡ್ ಪ್ರಕರಣಗಳಿಗೆ ಕಾಯ್ದಿರಿಸಿದ ಹಾಸಿಗೆಗಳು, ಐಸಿಯು, ವೆಂಟಿಲೇಟರ್ ಹಾಗೂ ಔಷಧಿಗಳನ್ನು ವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳಬೇಕು. ಕೋವಿಡ್ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಪೂರಕವಾಗುವ ಔಷಧಿಗಳ ದಾಸ್ತಾನುಗಳು ಸೇರಿದಂತೆ ಮತ್ತಿತರ ಸುರಕ್ಷಾ ಸಾಧನಗಳು ಹಾಗೂ ಪರಿಕರಗಳನ್ನು ಮುಂದಿನ 15 ರಿಂದ 20 ದಿನಗಳಿಗೆ ಆಗುವಂತೆ ದಾಸ್ತಾನು ಇಟ್ಟಕೊಳ್ಳಬೇಕು ಎಂದರು.
Advertisement
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್, ಸರ್ವೇಕ್ಷಣಾಧೀಕಾರಿ ಡಾ. ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಶಾನುಭೋಗ್, ಕೆಎಂಸಿ ಹಾಗೂ ವೆನ್ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.