ನವದೆಹಲಿ: ಪೆಟ್ರೋಲ್ ಬೆಲೆ ದಾಖಲೆಯ 100 ರೂ. ಗಡಿ ದಾಟಿದ ಬೆನ್ನಲ್ಲೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ತೈಲ ಬೆಲೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಈಗಿನ ತೈಲ ದರ ಏರಿಕೆಗೆ ಹಿಂದಿನ ಸರ್ಕಾರದ ನೀತಿಯೇ ಕಾರಣ ಎಂದು ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ತಮಿಳುನಾಡಿನಲ್ಲಿ ತೈಲ ಮತ್ತು ಅಡುಗೆ ಅನಿಲಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಒಂದು ವೇಳೆ ಹಿಂದಿನ ಸರ್ಕಾರಗಳು ತೈಲ ಆಮದು ಅವಲಂಬನೆಗೆ ಕಡಿವಾಣ ಹಾಕಿದ್ದರೆ ಇಂದು ಮಧ್ಯಮ ವರ್ಗಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ನಮ್ಮ ಸರ್ಕಾರ ತೈಲ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
Inaugurating important projects relating to Aatmanirbharta in the energy sector. https://t.co/wEW11egO7j
— Narendra Modi (@narendramodi) February 17, 2021
ವೈವಿಧ್ಯತೆ ಮತ್ತು ಕೌಶಲತೆ ಹೊಂದಿರುವ ನಾವುಗಳು ಇಂಧನದ ಆಮದಿನ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ಅವಲಂಬನೆ ಆಗಬೇಕೇ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ.
2019-20ನೇ ಆರ್ಥಿಕ ವರ್ಷದಲ್ಲಿ ಶೇ. 85ರಷ್ಟು ಇಂಧನವನ್ನು ವಿದೇಶಗಳಿಂದಲೇ ಆಮದು ಮಾಡಲಾಗಿದೆ. ಶೇ.53ರಷ್ಟು ಎಲ್ಪಿಜಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಅಗತ್ಯ ಇಂಧನಗಳ ಬೆಲೆ ಹೆಚ್ಚಳ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ. ಒಂದು ವೇಳೆ ಹಿಂದಿನ ಸರ್ಕಾರಗಳು ಈ ವಿಚಾರದ ಬಗ್ಗೆ ಆಗಲೇ ಗಮನ ಹರಿಸಿದ್ದರೆ ಜನ ಸಾಮಾನ್ಯರಿಗೆ ಇಂದು ಸಮಸ್ಯೆ ಆಗುತ್ತಿರಲಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟರು.
ಸರ್ಕಾರ ಮಧ್ಯಮ ವರ್ಗದ ಕಳವಳದ ಅರ್ಥವಾಗುತ್ತಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಕಬ್ಬಿನಿಂದ ಉತ್ಪಾದಿಸಿದ ಎಥೆನಾಲ್ನಿಂದ ತೈಲ ಆಮದನ್ನು ಕಡಿಮೆ ಮಾಡಲು ಮುಂದಾಗುತ್ತಿದ್ದೇವೆ. ಇದರಿಂದಾಗಿ ರೈತರಿಗೆ ಪರ್ಯಾಯ ಆದಾಯ ಮೂಲವೂ ದೊರೆಯಲಿದೆ ಎಂದರು.
2030ರ ವೇಳೆಗೆ ಶೇ.40ರಷ್ಟುಇಂಧನ ದೇಶದಲ್ಲೇ ಉತ್ಪಾದನೆ ಆಗಲಿದೆ. ಅದೇ ರೀತಿ ತಮ್ಮ ಸರ್ಕಾರ ನೈಸರ್ಗಿಕ ಅನಿಲದ ಪ್ರಮಾಣವನ್ನು ಈಗಿರುವ ಶೇ.6.3ರಿಂದ ಶೇ.15ಕ್ಕೆ ಏರಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆ ನೈಸರ್ಗಿಕ ಅನಿಲವನ್ನು ಜಿಎಸ್ಟಿ ಅಡಿಯಲ್ಲಿ ತರುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಮುಂದಿನ 5 ವರ್ಷದಲ್ಲಿ ಸರ್ಕಾರ 7.5 ಲಕ್ಷ ಕೋಟಿ ರೂ. ಹಣವನ್ನು ತೈಲ ಮತ್ತು ಗ್ಯಾಸ್ ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡಲಿದೆ. ಭಾರತಕ್ಕೆ ಬಂದು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಎಂದು ಈ ವೇಳೆ ಮೋದಿ ವಿಶ್ವಕ್ಕೆ ಕರೆ ನೀಡಿದರು.
ನೈಸರ್ಗಿಕ ಅನಿಲ ಜಿಎಸ್ಟಿ ವ್ಯಾಪ್ತಿಗೆ ಸೇರಿಲ್ಲ. ಈಗಲೂ ಇದರ ಮೇಲೆ ಈ ಹಿಂದೆ ಇದ್ದಂತೆ ಕೇಂದ್ರ ಅಬಕಾರಿ ಸುಂಕ, ರಾಜ್ಯಗಳ ವ್ಯಾಟ್, ಕೇಂದ್ರ ಸೇವಾ ತೆರಿಗೆಯನ್ನು ಹಾಕಲಾಗುತ್ತಿದೆ.