ಚಾಮರಾಜನಗರ: ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತಮಿಳುನಾಡಿನ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ ಕೆಲವರು ಕದ್ದು ಮುಚ್ಚಿ ನುಸುಳುತ್ತಿದ್ದು, ಅಂತಹವರನ್ನು ಹಿಡಿದು ಅಧಿಕಾರಿಗಳು ಕ್ವಾರಂಟೈನ್ ಮಾಡುತ್ತಿದ್ದಾರೆ.
ತಮಿಳುನಾಡಿನಿಂದ ಚಾಮರಾಜನಗರಕ್ಕೆ ರಾತ್ರೋ ರಾತ್ರಿ ಕದ್ದು ಬಂದಿದ್ದ 10ಕ್ಕೂ ಹೆಚ್ಚು ತಮಿಳು ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ತಮಿಳುನಾಡಿನಿಂದ ಜಿಲ್ಲೆಯ ಬದನಗುಪ್ಪೆ ಬಳಿ ಇರುವ ಗ್ರಾನೈಟ್ ಕಾರ್ಖಾನೆಗೆ ರಾತ್ರೋ ರಾತ್ರಿ ಗಡಿ ದಾಟಿ ಈ ಕಾರ್ಮಿಕರು ಬಂದಿದ್ದರು. ಇದರಿಂದ ಸ್ಥಳೀಯ ಕಾರ್ಮಿಕರು ಆತಂಕಕ್ಕೊಳಗಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ತಕ್ಷಣ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಗ್ರಾನೈಟ್ ಕಾರ್ಖಾನೆಗೆ ಧಾವಿಸಿ ತಮಿಳುನಾಡಿನಿಂದ ಬಂದಿದ್ದ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿ, ನಂತರ ಅಂಬುಲೆನ್ಸ್ ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.