– ಇಂದ್ರಜಿತ್ ಹೇಳಿಕೆ ವೈಯಕ್ತಿಕ
– ಹೊಸಬರ ಬಗ್ಗೆ ನನಗೆ ಗೊತ್ತಿಲ್ಲ
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ನಟಿ, ರಾಜಕಾರಣಿ ತಾರಾ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಬೊಮ್ಮಾಯಿಗೆ ಮನವಿ ಸಲ್ಲಿಸಿರುವ ತಾರಾ ಅವರಿಗೆ, ಸಿಎಂ ಬಿಎಸ್ವೈ ವಿಶ್ರಾಂತಿ ಹಿನ್ನೆಲೆಯಲ್ಲಿ ಭೇಟಿಗೆ ಅವಕಾಶ ಸಿಕ್ಕಿಲ್ಲ. ಸಿಎಂ ಭೇಟಿ ಸಾಧ್ಯವಾಗದೇ ಬಸವರಾಜ್ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.
Advertisement
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರಿಗೆ ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಮನವಿ ಮಾಡಿದ್ದೇನೆ. ಶಾಲಾ, ಕಾಲೇಜುಗಳ ಸಮೀಪ ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಬೇರೆ ದೇಶಗಳಲ್ಲಿ ಡ್ರಗ್ಸ್ ನಿಷೇಧದ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ ಎಂದರು.
Advertisement
ಇದೇ ವೇಳೆ ಇಂದ್ರಜಿತ್ ಲಂಕೇಶ್ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇಂದ್ರಜಿತ್ ಲಂಕೇಶ್ ಆರೋಪಿಸಿರುವ ವಿಚಾರಗಳ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಗೊತ್ತಿರಬಹುದು. ಹಾಗಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ. ಕಲಾವಿದರು ಡ್ರಗ್ಸ್ ಸೇವಿಸಿ ಶೂಟಿಂಗ್ ಗೆ ಬಂದಿದ್ದನ್ನ ನಾನು ಕಂಡಿಲ್ಲ. ಇದುವರೆಗೂ ನಾನು ಅಂಥೋರನ್ನು ನೋಡಿಲ್ಲ ಎಂದು ಹೇಳಿದರು.
Advertisement
ನಮ್ಮ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಸೇವನೆ ಬಗ್ಗೆ ನನಗೆ ಗೊತ್ತಿಲ್ಲ. ಯಾರೂ, ಯಾವಾಗಲೂ ಶೂಟಿಂಗ್ ವೇಳೆ ಡ್ರಗ್ಸ್ ಸೇವಿಸಿ ಬಂದಿಲ್ಲ. ಇಂದ್ರಜಿತ್ ಲಂಕೇಶ್ ಹೇಳಿಕೆ ಅವರ ವೈಯಕ್ತಿಕ. ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರ ಹೇಳಿಕೆ ಬಗ್ಗೆ ನಾನು ಏನೂ ಹೇಳಲು ಇಷ್ಟ ಪಡಲ್ಲ. ಇಂದ್ರಜಿತ್ ಲಂಕೇಶ್ ಹೇಳಿಕೆ ಬಗ್ಗೆ ತನಿಖೆ ಮಾಡಿ ಸರ್ಕಾರ ಸತ್ಯ ಹೊರಗೆಳೆಯುತ್ತೆ ಎಂದು ನುಡಿದರು.
ಈಗ ಇಚ್ಛಾಶಕ್ತಿಯುಳ್ಳ ಸರ್ಕಾರ ಇದೆ. ನಾವೆಲ್ಲರೂ ಈ ಸಂದರ್ಭದಲ್ಲಾದರೂ ಸರ್ಕಾರದ ಜೊತೆ ಕೈ ಜೋಡಿಸಬೇಕು. ಈ ಸರ್ಕಾರ ಡ್ರಗ್ಸ್ ನಿಯಂತ್ರಣಕ್ಕೆ ಐತಿಹಾಸಿಕ ನಿರ್ಧಾರ ತಗೊಳ್ಳುತ್ತೆ. ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಲಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ಜಗ್ಗೇಶ್ ಟ್ವೀಟ್ ಇವಳ ಬಗ್ಗೆ ಅವರಿಗೇ ಕೇಳಬೇಕು. ಅದರ ಬಗ್ಗೆನೂ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಅಂದ್ರು.
ಕೆಲ ಹೊಸ ನಟಿ, ನಟರು ಐಷಾರಾಮಿ ಕಾರು ಖರೀದಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದಕ್ಕೆ ಡ್ರಗ್ ಕಾರಣನಾ ಇಲ್ವ ಅಂತ ಗೊತ್ತಿಲ್ಲ. ನಮ್ಮ ಕಾಲದ ಸಂಭಾವನೆಗೂ ಈಗಿನ ಸಂಭಾವನೆಗೂ ಅಜಗಜಾಂತರ ವ್ಯತ್ಯಾಸ ಇದೆ. ಮೊದಲು ಕಾರು ಖರೀದಿಗೆ ಪೂರ್ತಿ ಹಣ ಕಟ್ಟಬೇಕಿತ್ತು. ಈಗ ಕಂತಲಿ ಹಣ ಕಟ್ಟಿ ಕಾರು ತಗೋಬಹುದು. ಹೊಸಬರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಸಿನಿಮಾ ಇತಿಹಾಸದಲ್ಲಿ ಪಾರ್ಟಿಗಳಲ್ಲಿ ಕಲಾವಿದರನ್ನು ಬುಕ್ ಮಾಡುವುದು ನಡೆದಿಲ್ಲ. ಆ ರೀತಿ ನಡೆದಿದ್ದರೆ ಅದು ಬೇಸರದ ಸಂಗತಿ. ಇಚ್ಛಾಶಕ್ತಿ ಇರುವ ಸರ್ಕಾರ ಬಂದಿದ್ದು, ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲಿದೆ. ನಾನು ಹಿಂದೆ ವಿಧಾನಪರಿಷತ್ ನಲ್ಲಿ ಮಾತಾನಡಿದ್ದೆ. ಅದು ವಿಧಾನಸಭೆಯಲ್ಲೂ ಚರ್ಚೆ ನಡೆದಿತ್ತು. ಇದೀಗ ನಾಲ್ಕು ದಿನಗಳಿಂದ ನಿರಂತರ ಸುದ್ದಿ ಬಿತ್ತರವಾಗುತ್ತಿದೆ ಎಂದು ತಿಳಿಸಿದರು.