– ಬೆಂಗಳೂರು ಉಸ್ತುವಾರಿ ಆಸೆ ಬಿಚ್ಚಿಟ್ಟ ಸಚಿವರು
– ಡಿಕೆಶಿಗೆ ಇಡಿ, ಐಟಿಯ ಲಿಂಕ್ ಜಾಸ್ತಿ ಬೆಳೆದಿದೆ
ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಯಾಕೆ ಶಾಸಕ ಜಮೀರ್ ಅಹ್ಮದ್ ಅವರ ಮನೆ ಮೇಲೆ ಇಡಿ ದಾಳಿ ಮಾಡಿಸಿರಬಾರದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ಇಡಿ ದಾಳಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರು ಪದೇ ಪದೇ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎನ್ನುತ್ತಿದ್ದರು. ಇದು ಡಿಕೆ ಶಿವಕುಮಾರ್ ಅವರಿಗೆ ಅಜೀರ್ಣವಾಗಿರಬೇಕು. ಅದು ಅಲ್ಲದೆ ಡಿಕೆಶಿ ಅವರಿಗೆ ಇಡಿ- ಐಟಿಯ ಲಿಂಕ್ ಜಾಸ್ತಿ ಬೆಳೆದಿದೆ. ಅವರೇ ಯಾಕೆ ಜಮೀರ್ ಅವರ ಮನೆ ಮೇಲೆ ದಾಳಿ ಮಾಡಿಸಿರಬಾರದು. ಬಿಜೆಪಿ ಇಂತಹ ದಾಳಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ನಾವು ಡಿಕೆ ಶಿವಕುಮಾರ್ ಅವರ ಮೇಲೆಯೇ ಹೀಗೆ ಬೆರಳು ಮಾಡಬಹುದಲ್ವಾ? ಎಂದು ಹೇಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
Advertisement
Advertisement
ಐಟಿ ಮತ್ತು ಇಡಿ ಅವರ ಕೆಲಸ ಅವರು ಮಾಡುತ್ತಾರೆ. ವ್ಯವಹಾರಗಳು ಸರಿಯಿದ್ದಾಗ ಯಾರು ಅದಕ್ಕೆ ಹೆದರುವ ಅಗತ್ಯವಿಲ್ಲ. ಐಟಿ, ಇಡಿ ಕೇಳುವ ದಾಖಲೆ ಕೊಟ್ಟರೆ ಮುಗಿಯಿತು. ಅದನ್ನು ಬಿಟ್ಟು ಇವರು ಬೇರೆ ರೀತಿಯೇ ಮಾತನಾಡುತ್ತಿದ್ದಾರೆ. ಇವರನ್ನು ನೋಡಿದರೆ ಏನೋ ವ್ಯವಹಾರ ಸರಿಯಿಲ್ಲ ಎನಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಎಸ್ಪಿಯಿಂದ ನನಗೆ ಮೋಸವಾಗಿದೆ, ನನ್ನಿಂದ ಬಿಎಸ್ಪಿಗೆ ಮೋಸ ಆಗಿಲ್ಲ: ಎನ್. ಮಹೇಶ್
Advertisement
ಇದೇ ವೇಳೆ ಮೈಸೂರಿನ ಪ್ರವಾಸಿ ತಾಣಗಳು ತೆರದಿರಬೇಕೋ ಅಥವಾ ಮುಚ್ಚಬೇಕೋ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನದೊಳಗೆ ಸಂಪೂರ್ಣ ವರದಿ ಕೊಡುವಂತೆ ಜಿಲ್ಲಾಡಳಿತವನ್ನು ಕೇಳಿದ್ದೇನೆ. ನಾಳೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ಜನರಿಗೂ ತೊಂದರೆ ಆಗದಂತೆ, ವ್ಯಾಪಾರಸ್ಥರಿಗೆ ಅನಾನುಕೂಲವಾಗದಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಲಾಕ್ಡೌನ್ನಿಂದ ಸಾಕಷ್ಟು ನಷ್ಟವಾಗಿವೆ. ಹೀಗಾಗಿ ಏಕಾಏಕಿ ಸಂಪೂರ್ಣ ಮುಚ್ಚುವುದು ಸಹ ಕಷ್ಟವಗುತ್ತೆ. ನಾಳೆ ಇದೆಲ್ಲವನ್ನು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಬೆಂಗಳೂರು ಉಸ್ತುವಾರಿ ಖಾತೆ ಬಗ್ಗೆ ಮಾತನಾಡಿದ ಅವರು, ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ, ಬೆಂಗಳೂರು ಉಸ್ತುವಾರಿ ಬೇಕು. ಸ್ಥಳೀಯ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ಖಾತೆ ನನಗೆ ಅಗತ್ಯವಿದೆ. ಸಿಎಂ ನಿನಗೆ ಯಾವ ಖಾತೆ ಬೇಕು ಎಂದು ನನಗೆ ಕೇಳಿದರೆ ನಾನು ಬೆಂಗಳೂರು ಖಾತೆ ಬೇಕು ಎಂದು ಹೇಳುತ್ತೇನೆ. ಆದರೆ ಅವರು ಕೇಳುವುದಿಲ್ಲ, ನಾನು ಹೇಳುವುದಿಲ್ಲ ಎಂದು ಗೊತ್ತಿದೆ. ನೀವು ಕೇಳುತ್ತಿದ್ದಿರಿ, ನಾನು ಹೇಳುತ್ತಿದ್ದೇನೆ ಅಷ್ಟೇ ಎಂದು ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ.