– ಮೊದಲ ಬೆಳೆ ಬೆಳೆದು ಯಶಸ್ವಿಯಾಗಿ ಕಟಾವ್ ಮಾಡಿದ್ರು
– ಜಪ್ತಿ ಮಾಡಿದ್ದ ವಾಹಗಳಲ್ಲಿ ಸಾವಯವ ಕೃಷಿ
ತಿರುವನಂತಪುರಂ: ಸಾಮಾನ್ಯವಾಗಿ ಕದ್ದ ವಾಹನಗಳು, ಸರಿಯಾದ ದಾಖಲೆಗಳಿಲ್ಲ ವಾಹನಗಳು, ಅಪಘಾತ ನಡೆದ ವಾಹನಗಳು ಸೇರಿದಂತೆ ಅನೇಕ ವಾಹನಗಳು ಪೊಲೀಸ್ ಠಾಣೆಯಲ್ಲಿ ವರ್ಷಗಳಿಂದ ತುಕ್ಕು ಹಿಡಿಯುತ್ತಿರುತ್ತವೆ. ಆದರೆ ಕೇರಳ ಪೊಲೀಸರು ಅಂತಹ ಜಪ್ತಿ ಮಾಡಿದ್ದ ವಾಹನಗಳಲ್ಲಿಯೇ ಸಾವಯವ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
Advertisement
ಪೊಲೀಸರು ಜಪ್ತಿ ಮಾಡುವ ವಾಹನಗಳನ್ನು ಇಷ್ಟು ವರ್ಷದೊಳಗೆ ಮಾಲೀಕರು ಬಂದು ತೆಗೆದುಕೊಂಡು ಹೋಗದೆ ಇದ್ದರೆ ಅಂತಹ ವಾಹನಗಳನ್ನು ಹರಾಜು ಮಾಡಲು ಪೊಲೀಸ್ ಇಲಾಖೆಗೆ ಅನುಮತಿ ಇದೆ. ಆದರೆ ಹಾಗೆ ಮಾಡುವುದರಲ್ಲಿ ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಇದಲ್ಲದೆ ಈ ವಾಹನಗಳಿಗೆ ಹೆಚ್ಚು ಖರೀದಿದಾರರು ಇರುವುದಿಲ್ಲ. 2019ರ ವರದಿಯ ಪ್ರಕಾರ, ರಾಜ್ಯದ ಪೊಲೀಸ್ ಠಾಣೆಗಳಲ್ಲಿ 40,000ಕ್ಕೂ ಹೆಚ್ಚು ವಾಹನಗಳು ತುಕ್ಕು ಹಿಡಿಯುತ್ತಿವೆ.
Advertisement
ತುಕ್ಕು ಹಿಡಿಯುತ್ತಿರುವ ವಾಹನಗಳನ್ನು ನೋಡಲಾಗದೆ ಬೇಸರ ಮಾಡಿಕೊಂಡಿದ್ದ ತ್ರಿಶೂರ್ ಜಿಲ್ಲೆಯ ಚೆರುತುರುತಿ ಪೊಲೀಸರು ಅವುಗಳಲ್ಲಿ ಕೆಲವು ವಾಹನಗಳಲ್ಲಿ ಸಾವಯವ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಸಿಂಪ್ಸನ್, ಸುಧಾಕರನ್, ಬೇಬಿ, ರಂಜಿತ್, ರಘು ಮತ್ತು ಅನಿಲ್ ಅವರೊಂದಿಗೆ ಕೃಷಿಕರೂ ಆಗಿರುವ ಸಿವಿಲ್ ಪೊಲೀಸ್ ಅಧಿಕಾರಿ ರಂಗರಾಜ್ ಕೃಷಿಯನ್ನು ನೋಡಿಕೊಳ್ಳುತ್ತಾರೆ.
Advertisement
Advertisement
“ನಾವು ಮರಳು ಕಳ್ಳಸಾಗಣೆಯಲ್ಲಿ ಜಪ್ತಿ ಮಾಡಿದ್ದ ಕೆಲವು ಮಿನಿ ಲಾರಿಗಳನ್ನು ಹೊಂದಿದ್ದೇವೆ. ಮೂರು ತಿಂಗಳ ಹಿಂದೆ ಅವುಗಳಲ್ಲಿ ತರಕಾರಿಗಳನ್ನು ಬೆಳೆಸಲು ನಾವು ನಿರ್ಧರಿಸಿದ್ದೇವೆ. ಇದು ಯಶಸ್ವಿಯಾಗಿದ್ದು, ಕಳೆದ ವಾರ ನಮ್ಮ ಮೊದಲ ಬೆಳೆಯನ್ನ ಕೂಡ ಕಟಾವ್ ಮಾಡಿದ್ದೇವೆ. ನಾವು ತರಕಾರಿಗಳನ್ನು ನಮ್ಮ ಪೊಲೀಸ್ ಕ್ಯಾಂಟೀನ್ಗೆ ನೀಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಸಿಂಪ್ಸನ್ ಹೇಳಿದ್ದಾರೆ.
ಕೃಷಿ ಯಶಸ್ವಿಯಾದ ಕಾರಣ, ಅದನ್ನು ಇತರ ವಾಹನಗಳಿಗೂ ವಿಸ್ತರಿಸಲು ಪೊಲೀಸ್ ಅಧಿಕಾರಿಗಳು ಯೋಜಿಸಿದ್ದಾರೆ. ಮೊದಲ ಹಂತದಲ್ಲಿ, ಅವರು ಬೆಂಡೆಕಾಯಿ, ಬೀನ್ಸ್ ಮತ್ತು ಪಾಲಕ್ ಸೊಪ್ಪನ್ನು ಬೆಳೆದಿದ್ದಾರೆ. ಈಗ ಇತರ ತರಕಾರಿಗಳನ್ನು ಬೆಳೆಯಲು ಯೋಜಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಯಲ್ಲಿ ವಾಹನವನ್ನು ವಶಪಡಿಸಿಕೊಂಡರೆ, ಅದರ ಮಾಲೀಕರು ಎಂದಿಗೂ ವಾಪಸ್ ಪಡೆಯಲು ಬಯಸುವುದಿಲ್ಲ. ಇನ್ನೂ ಅಪಘಾತ ವಾಹನಗಳ ವಿಷಯದಲ್ಲಿ, ನ್ಯಾಯಾಲಯದ ಆದೇಶದ ನಂತರವೂ ಅವುಗಳನ್ನು ಮಾಲೀಕರು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಅವರು ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕಾರಣ ಮತ್ತೆ ಆ ವಾಹನ ಬೇಡ ಎಂದುಕೊಂಡಿರಬಹುದು. ಇನ್ನೂ ಕೆಲವು ಕೇಸ್ಗಳಲ್ಲಿ ತೀರ್ಪು ಪಡೆಯಲು ಕೆಲವು ವರ್ಷಗಳು ತೆಗೆದುಕೊಳ್ಳಬಹುದು. ಆ ಹೊತ್ತಿಗೆ ವಾಹನವು ತುಕ್ಕು ಹಿಡಿದು ನಿಷ್ಪ್ರಯೋಜಕವಾಗುತ್ತವೆ. ಆದ್ದರಿಂದ ತೀರ್ಪು ಮಾಲೀಕರ ಕಡೆ ಬಂದರೂ ತುಕ್ಕು ಹಿಡಿದಿರುವ ವಾಹನವನ್ನು ವಾಪಸ್ ತೆಗೆದುಕೊಂಡು ಹೋಗಲು ಬಯಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಗಳು ವಾಹನಗಳನ್ನು ಹರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಅದನ್ನು ಮಾಡಲು ನಮಗೆ ಸಾಕಷ್ಟು ಕಾನೂನು ಅನುಮತಿ ಬೇಕಾಗುತ್ತವೆ. ಇದು ಸುಲಭವಲ್ಲ, ಆದ್ದರಿಂದ ಈ ವಾಹನಗಳು ಅನೇಕ ವರ್ಷಗಳ ಕಾಲ ಇಲ್ಲಿಯೇ ಇರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಿಂದ ತೆರವುಗೊಳಿಸುವಂತೆ 2018ರಲ್ಲಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಎಲ್ಲಾ ಎಸ್ಎಚ್ಒಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಅದು ಯಶಸ್ವಿಯಾಗಿಲ್ಲ.