ಮುಂಬೈ: ಭಾರತದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬೆಂಗಳೂರು ಸೇರಿದಂತೆ ದೇಶದ ಒಟ್ಟು ಒಂಬತ್ತು ನಗರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಮಾಡಿ ತಯಾರಿ ನಡೆಸುವಂತೆ ಆಯಾ ರಾಜ್ಯದ ಕ್ರಿಕೆಟ್ ಸಂಸ್ಥೆಗಳಿಗೆ ಸೂಚನೆ ನೀಡಿದೆ.
Advertisement
ಈಗಾಗಲೇ ಭಾರತದಲ್ಲಿ 14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ನಡೆಯುತ್ತಿದೆ. ಇದಾದ ಬಳಿಕ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ. ಹಾಗಾಗಿ ಈಗಿನಿಂದಲೇ ತಯಾರಿಯಲ್ಲಿ ತೊಡಗಿರುವ ಬಿಸಿಸಿಐ ಪಂದ್ಯಾಟ ನಡೆಸಲು, ಮುಂಬೈ, ದೆಹಲಿ, ಕೋಲ್ಕತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಹಾಗೂ ಲಕ್ನೋ ಸೇರಿ ಒಟ್ಟು 9 ನಗರಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.
Advertisement
Advertisement
ಟಿ20 ವಿಶ್ವಕಪ್ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿತ್ತು. ಆದರೆ ಕೊರೊನಾದಿಂದಾಗಿ 2021ಕ್ಕೆ ಮುಂದೂಡಲಾಯಿತು. ಬಳಿಕ 2021 ಆತಿಥ್ಯವನ್ನು ಭಾರತಕ್ಕೆ ಸ್ಥಳಾಂತರಿಸಲಾಯಿತು. ಇದೀಗ ಭಾರತದಲ್ಲಿ ವಿಶ್ವಕಪ್ ಪಂದ್ಯಾವಳಿಗಾಗಿ ತಯಾರಿ ಕೂಡ ಆರಂಭವಾಗಿದೆ.
Advertisement
ಈ ಹಿಂದೆ 2016ರಲ್ಲಿ ನಡೆದ ಟಿ20 ಟೂರ್ನಿಯ ಆತಿಥ್ಯ ವಹಿಸಿಕೊಂಡಿದ್ದ ಭಾರತ ಮುಂಬೈ, ದೆಹಲಿ, ಕೋಲ್ಕತ್ತಾ, ಪಂಜಾಬ್ ಮತ್ತು ನಾಗ್ಪುರದಲ್ಲಿ ಪಂದ್ಯ ನಡೆದಿತ್ತು. ಈ ಬಾರಿ ಚೆನ್ನೈ, ಅಹಮದಾಬಾದ್ ಮತ್ತು ಲಕ್ನೋ ಸೇರಿ ಮೂರು ಹೊಸ ಸ್ಥಳಗಳೊಂದಿಗೆ ಒಟ್ಟು 9 ನಗರಗಳನ್ನು ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ವಿಶೇಷವಾಗಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಎಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ ತಯಾರಿ ನಡೆಸಲು ಬಿಸಿಸಿಐ ಸೂಚನೆ ನೀಡಿದೆ ಎಂದು ವರದಿಯಾಗಿದೆ.