ಮಡಿಕೇರಿ: ರಾಜ್ಯಕ್ಕೆ ಮುಂಗಾರು ಅಧಿಕೃತವಾಗಿ ಪ್ರವೇಶ ಪಡೆದಿದ್ದು, ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಆಗೊಮ್ಮೆ ಈಗೊಮ್ಮೆ ಸಾಧಾರಣ ಮಳೆ ಸುರಿಯುತ್ತಿದೆ. ಆದರೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಸಹಜವಾಗಿಯೇ ಅದು ವಿಪರೀತವಾಗಿ ಸುರಿಯುತ್ತದೆ. ಒಂದು ವೇಳೆ ಭಾರೀ ಪ್ರಮಾಣದಲ್ಲಿ ಸುರಿದಿದ್ದೇ ಆದಲ್ಲಿ ನದಿ ಪಾತ್ರದ ಜನರಿಗೆ ಮತ್ತೆ ಕಂಟಕ ಮಾತ್ರ ತಪ್ಪಿದ್ದಲ್ಲ. ಹೀಗಾಗಿ ಕೊಡಗು ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ನೋಟಿಸ್ ಒಂದು ನೀಡಿದ್ದು, ಅದು ಜನಾಕ್ರೋಶಕ್ಕೆ ಕಾರಣವಾಗಿದೆ.
Advertisement
ಹೌದು, ಮಳೆಗಾಲ ಶುರುವಾಗಿದ್ದರಿಂದ ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಮನೆಗಳ ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಆದರೆ ಪರ್ಯಾಯ ವ್ಯವಸ್ಥೆಗಳನ್ನೇ ಮಾಡದೆ ನೋಟಿಸ್ ನೀಡಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದ ಬಾರಿಯ ಪ್ರವಾಹ ಸಂತ್ರಸ್ತರಿಗೆ ಇನ್ನೂ ಮನೆಗಳು ವಿತರಣೆಯಾಗಿಲ್ಲ. ಅಂತದ್ದರಲ್ಲಿ ಪರ್ಯಾಯ ವ್ಯವಸ್ಥೆ ಮಾಡದೇ ಹಲವು ಹಳ್ಳಿಗಳ ನೂರಾರು ಕುಟುಂಬಗಳ ಮನೆಗಳ ಮುಂದೆ ನೋಟಿಸ್ ಅಂಟಿಸಿರುವ ಕ್ರಮಕ್ಕೆ ಜನ ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇನ್ನು ನಾಲ್ಕೈದು ತಿಂಗಳ ಹಿಂದೆ ಬದಲಿ ನಿವೇಶನ ನೀಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಕೇವಲ ಜಾಗವನ್ನು ಗುರುತಿಸಿದೆ ಅಷ್ಟೆ. ಅದನ್ನು ಸಮತಟ್ಟು ಮಾಡುವುದಾಗಲಿ ಅಥವಾ ಅಲ್ಲಿರುವ ಮರ ಗಿಡಗಳನ್ನು ತೆರವು ಮಾಡುವುದನ್ನು ಆಗಲಿ ಮಾಡದೇ, ಸುಮ್ಮನೆ ಮನೆಗಳನ್ನು ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗುವುದು ಎನ್ನೋದು ಜನರ ಪ್ರಶ್ನೆ. ಇಂದಿಗೂ ಜನ ಪ್ರವಾಹದಿಂದ ಶಿಥಿಲಾವಸ್ಥೆಗೆ ಬಂದಿರುವ ಮನೆಗಳಲ್ಲೇ ಜನ ಬದುಕುತ್ತಿದ್ದಾರೆ.
Advertisement
ಒಟ್ಟಿನಲ್ಲಿ ಒಂದೆಡೆ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ ಎನ್ನುತ್ತಿದೆ. ಆದರೆ ಕಳೆದ ಬಾರಿಯ ಸಂತ್ರಸ್ತರಿಗೆ ಯಾವುದೇ ಬದಲಿ ವ್ಯವಸ್ಥೆ ಮಾಡದೆ, ಕೇವಲ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.