ಹಾವೇರಿ: ತಜ್ಞರ ಪ್ರಕಾರ ಜೂನ್ ಅಂತ್ಯದ ವೇಳೆಗೆ ಕೊರೊನಾ ಹತೋಟಿಗೆ ಬರಲಿದೆ. ಎರಡನೇ ಅಲೆ ಬಹಳಷ್ಟು ತಗ್ಗಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಅಂತ್ಯದ ವೇಳೆಗೆ ಕೊರೊನಾ ಹತೋಟಿಗೆ ಬರಲಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ತಜ್ಞರು ಹೇಳಿದಂತೆಯೇ ಇಲ್ಲಿಯವರೆಗೆ ನಡೆದಿದೆ. ನಾವು ಕೂಡ ಜೂನ್ ಅಂತ್ಯದ ವೇಳೆಗೆ ಎರಡನೇ ಅಲೆ ಕಡಿಮೆ ಆಗುತ್ತದೆ ಎಂದು ನಂಬಿದ್ದೇವೆ ಎಂದರು.
ಲಾಕ್‍ಡೌನ್ ನಿಂದ ಚೈನ್ ಬ್ರೇಕ್ ಆಗುತ್ತದೆ. ಕಳೆದ 12 ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುವ ಕುರಿತು ಚಿಂತನೆ ನಡೆದಿದೆ ಎಂದರು.
ಹಳ್ಳಿಗಳಲ್ಲಿ ಸೋಂಕಿತರಿಗೆ ಹೋಮ್ ಐಸೋಲೇಶನ್ ಬದಲು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಲು ನಿರ್ಧಾರ ಮಾಡಿದ್ದೇವೆ. ಹಳ್ಳಿಗಳಲ್ಲಿನ ಸೋಂಕಿತರಿಗೆ ಮೊದಲ ದಿನದಿಂದಲೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ ಮತ್ತು ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.