ಬೆಂಗಳೂರು: ಜುಲೈ 30, 31 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಜುಲೈ 30 ಜೀವಶಾಸ್ತ್ರ, ಗಣಿತ ಪರೀಕ್ಷೆ ಇದ್ದರೆ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಆಗಸ್ಟ್ 1 ರಂದು ಹೊರನಾಡು – ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ.
Advertisement
Advertisement
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಇಟಿ, ನೀಟ್ ಪರೀಕ್ಷೆ- ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಲಾಸ್
Advertisement
ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಕಾರಣ ಕೊಠಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಬೇಕಾಗುತ್ತದೆ. ಹೀಗಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದರು. ಈ ಮೊದಲು ಏಪ್ರಿಲ್ 22, 24 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿತ್ತು.
Advertisement
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಇದ್ದು, ಶೀಘ್ರವೇ ಪಿಯುಸಿ ಬೋರ್ಡ್ ದಿನಾಂಕವನ್ನು ನಿಗದಿ ಮಾಡಲಿದೆ. ಡಿಗ್ರಿ ಕಾಲೇಜ್ ಗಳು ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಪರೀಕ್ಷೆ, ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಈಗಾಗಲೇ ಕಮಿಟಿ ರಚನೆ ಮಾಡಿ ವರದಿ ನೀಡಿದೆ. ವರದಿ ಏನಿದೆ ಅಂತ ಸಚಿವರು ನೋಡಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅಶ್ವಥ್ ನಾರಾಯಣ್ ಉತ್ತರಿಸಿದರು.
ಎಂಜಿನಿಯರಿಂಗ್ ಸೀಟ್ ಶುಲ್ಕ ಹೆಚ್ಚಳ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ, ಶುಲ್ಕ ಹೆಚ್ಚಳ ಮಾಡಬೇಕು ಅಂತ ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡಿಲ್ಲ. ಕೊರೊನಾ ಇರುವ ಕಾರಣ ಈ ಬಾರಿ ಅಡ್ಮಿಷನ್ ಆಗುವುದೇ ದೊಡ್ಡ ವಿಷಯವಾಗಲಿದೆ. ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.