ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಸಚಿವ ಜಿ.ಮಾದೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಗಾಂಧಿವಾದಿಯಾಗಿ, ಗಾಂಧೀಜಿಯವರ ತತ್ವ, ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿದ ಮಾದೇಗೌಡರು, ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.
Advertisement
Advertisement
ಅವರ ನಿಧನದಿಂದ ರೈತ ಹಾಗೂ ಜನಪರ ಹೋರಾಟಗಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Advertisement
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಸಂತಾಪ ಸೂಚಿಸಿದ್ದು, ಕಾವೇರಿ ನದಿ ನೀರು ಮತ್ತು ಕನ್ನಡ ನಾಡಿನ ನೆಲ, ಜಲದ ವಿಚಾರದಲ್ಲಿ ರಾಜೀರಹಿತ ಹೋರಾಟ ನಡೆಸುತ್ತಿದ್ದ ರೈತ ಮತ್ತು ಶ್ರಮಿಕರ ಒಡನಾಡಿ ಜಿ.ಮಾದೇಗೌಡ ಅವರು ನನ್ನ ಅತ್ಯಂತ ಆತ್ಮೀಯರು. ಇವರ ನಿಧನ ನನಗೆ ಅಪಾರ ದುಃಖ ತಂದಿದೆ. ಜಿ.ಮಾದೇಗೌಡರು ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಉಸಿರಿರುವವರೆಗೂ ಹೋರಾಟ ಮನೋಭಾವವನ್ನು ಬಿಟ್ಟಿರಲಿಲ್ಲ ಎಂದು ಸ್ಮರಿಸಿದ್ದಾರೆ.
Advertisement
ಕಾವೇರಿ ಹೋರಾಟಕ್ಕೆ ಬದುಕನ್ನು ಅರ್ಪಿಸಿಕೊಂಡಿದ್ದ ಮಾಜಿ ಸಂಸದ ಜಿ.ಮಾದೇಗೌಡರ ನಿಧನದಿಂದಾಗಿ ಹಳೆ ತಲೆಮಾರಿನ ಅಪರೂಪದ ರಾಜಕೀಯ ಹೋರಾಟಗಾರರೊಬ್ಬರನ್ನು ಕಳೆದುಕೊಂಡು ನಾಡು ಬಡವಾಗಿದೆ.
ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/rQtd8NtxUj
— Siddaramaiah (@siddaramaiah) July 17, 2021
ತಮ್ಮ ಬದುಕಿನ ಕೊನೆಯವರೆಗೂ ಕ್ರಿಯಾಶೀಲರಾಗಿದ್ದ ಮಾದೇಗೌಡರು, ಜಿಲ್ಲೆಯ ರೈತರ ಹಿತಕ್ಕೆ ದಕ್ಕೆ ಬಂದಾಗೆಲ್ಲ ಪ್ರತಿಭಟನೆಯ ಧ್ವನಿಯಾಗಿದ್ದರು. ಅಗತ್ಯ ಬಿದ್ದಾಗಲೆಲ್ಲಾ ಸರ್ಕಾರಕ್ಕೆ ಸಲಹೆಗಳನ್ನೂ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮೈಷುಗರ್ ಕಾರ್ಖಾನೆಯ ಖಾಸಗೀಕರಣದ ಪ್ರಸ್ತಾಪದ ವಿರುದ್ಧ ನಿರಂತರವಾಗಿ ಹೋರಾಟಗಾರರ ಜೊತೆ ನಿಂತಿದ್ದರು ಮತ್ತು ಇಳಿ ವಯಸ್ಸಿನಲ್ಲಿಯೂ ಅನೇಕ ಪ್ರತಿಭಟನೆಗಳಲ್ಲಿ ಖುದ್ದು ಭಾಗವಹಿಸಿದ್ದರು.
ಹಿಡಿದ ಕೆಲಸವನ್ನು ಸಾಧಿಸುವ ಹಠವಾದಿಯಾಗಿದ್ದ ಮಾದೇಗೌಡರು, ಕೆ.ಎಂ.ದೊಡ್ಡಿಯಲ್ಲಿ ಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ನೆಲೆಯಲ್ಲೇ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದರು. ಸದಾ ಜಿಲ್ಲೆಯ ರೈತರ ಧ್ವನಿಯಾಗಿದ್ದ ಮಾದೇಗೌಡರ ಸಾವು ಜಿಲ್ಲೆಯ ಜನಪರ ಹೋರಾಟಗಳಿಗೆ ಮತ್ತು ರಾಜಕಾರಣಕ್ಕೆ ಆದ ಬಹುದೊಡ್ಡ ನಷ್ಟ. ಇವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಲೇ ಜಿಲ್ಲೆಯ ರೈತ ಸಮುದಾಯಕ್ಕೆ, ಕುಟುಂಬವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಮುತ್ಸದ್ಧಿ ರಾಜಕಾರಣಿ, ರೈತ ಹೋರಾಟಗಾರ ಜಿ.ಮಾದೇಗೌಡರ ನಿಧನ ಸಂಗತಿ ತೀವ್ರ ನೋವುಂಟುಮಾಡಿದೆ. ಕಾವೇರಿ ರಕ್ಷಣೆ, ರೈತರ ಹಿತಕ್ಕಾಗಿ ಶ್ರಮಿಸಿದ್ದವರು ಮಾದೇಗೌಡರು. ಅವರ ನಿಧನದಿಂದ ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಅವರು ಗುಣವಾಗುವ ವಿಶ್ವಾಸ ಹುಸಿಯಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಮುತ್ಸದ್ಧಿ ರಾಜಕಾರಣಿ, ರೈತ ಹೋರಾಟಗಾರ G. ಮಾದೇಗೌಡರ ನಿಧನ ಸಂಗತಿ ತೀವ್ರ ನೋವುಂಟುಮಾಡಿದೆ. ಕಾವೇರಿ ರಕ್ಷಣೆ, ರೈತರ ಹಿತಕ್ಕಾಗಿ ಶ್ರಮಿಸಿದ್ದವರು ಮಾದೇಗೌಡರು. ಅವರ ನಿಧನದಿಂದ ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಅವರು ಗುಣವಾಗುವ ವಿಶ್ವಾಸ ಹುಸಿಯಾಗಿದೆ. pic.twitter.com/jOP9pPXWjF
— H D Kumaraswamy (@hd_kumaraswamy) July 17, 2021
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಹ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ದಶಕಗಳ ಜನಪರ ಚಳುವಳಿಗಳ ಮೂಲಕ ಮಂಡ್ಯ ಜಿಲ್ಲೆಯ, ಕಾವೇರಿ ನದಿಯ ಹಾಗೂ ರಾಜ್ಯದ ಅಸ್ಮಿತೆ ಎತ್ತಿ ಹಿಡಿಯುವ ಕಾರ್ಯವನ್ನು ಜಿ.ಮಾದೇಗೌಡರು ಮಾಡಿದ್ದರು. ಅದರಲ್ಲೂ ಕಾವೇರಿ ನದಿ ನೀರು ಹೋರಾಟಗಳಲ್ಲಿ ಅವರ ಪಾತ್ರ ಮಹತ್ವದ್ದು. ಅವರ ಅಕಾಲಿಕ ನಿಧನದಿಂದ ರಾಜ್ಯ ಮತ್ತು ದೇಶ ಜನಪರ ಕಾಳಜಿಯ ನಾಯಕರನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಅಪಾರ ಬಂಧುಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಹ ತೀವ್ರ ಶೋಕ ವ್ಯಕ್ತಪಡಿಸಿದ್ದು, ಮಂಡ್ಯ ನೆಲದ ಅಪ್ಪಟ ಹೋರಾಟಗಾರ ಜಿ.ಮಾದೇಗೌಡರು, ತಮ್ಮ ಜನಪರ ಹೋರಾಟಗಳಿಂದ ಸಾಮಾಜಿಕ ಜೀವನದಲ್ಲಿ ಅಪಾರ ಗೌರವ ಗಳಿಸಿದವರು. ದಶಕಗಳ ನಿರಂತರ ಹೋರಾಟ, ಅಭಿವೃದ್ಧಿ ಬಗ್ಗೆ ಚಿಂತನೆ, ಜನಪರ ಚಳುವಳಿಗಳ ಮೂಲಕ ಬದುಕು ಸಾರ್ಥಕಗೊಳಿಸಿ ಕೊಂಡ ಮಾದೇಗೌಡರು, ಗಾಂಧಿವಾದವನ್ನು ನಂಬಿದವರು ಹಾಗೂ ಬದುಕಿನುದ್ದಕ್ಕೂ ಅದನ್ನು ಪಾಲಿಸಿದವರು. ಮಂಡ್ಯದಲ್ಲಿ ಗಾಂಧಿ ಭವನ, ಗಾಂಧಿ ಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಸ್ಥಾಪನೆಗೆ ಕಾರಣರಾದವರು.
ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ, ಒಂದು ಬಾರಿ ಸಚಿವರಾಗಿ ಅಗಾಧ ಅನುಭವ ಪಡೆದವರು. ರೈತರ ಸಂಕಷ್ಟಕ್ಕೆ ಸದಾ ಮಿಡಿಯುತ್ತಿದ್ದರು. ರೈತ ಚಳುವಳಿ ಹಾಗೂ ಕಾವೇರಿ ಹೋರಾಟಗಳಲ್ಲಿ ಅವರು ವಹಿಸಿದ ಪಾತ್ರ ಇತಿಹಾಸದಲ್ಲಿ ಉಳಿಯುವಂತಹದ್ದು, ಅವರ ನಿಧನದಿಂದ ಕರ್ನಾಟಕ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅದ್ಭುತ ಜನಪರ ನಾಯಕನನ್ನು ಕಳೆದುಕೊಂಡಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.