LatestMain PostTechTelecom

ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?

ಮುಂಬೈ: ಕಡಿಮೆ ಬೆಲೆಗೆ ಮೊಬೈಲ್ ಡೇಟಾ ನೀಡಿ ಕ್ರಾಂತಿ ಮಾಡಿದ್ದ ಜಿಯೋ ಈಗ ಕಡಿಮೆ ದರದಲ್ಲಿ 4ಜಿ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‍ನ 44ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಖ್ಯಸ್ಥ ಮುಕೇಶ್ ಅಂಬಾನಿ ‘ಜಿಯೋಫೋನ್  ನೆಕ್ಸ್ಟ್’ ಎಂಬ ಹೆಸರಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿದ್ದಾರೆ.

ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಮತ್ತು ಬಜೆಟ್ ಬೆಲೆಯ ಸ್ಮಾರ್ಟ್ ಫೋನ್‍ಗಳನ್ನೇ ಹೆಚ್ಚಿನ ಜನ ಖರೀದಿಸುತ್ತಿದ್ದಾರೆ. ಈ ಮಾರುಕಟ್ಟೆಯ ತಂತ್ರವನ್ನು ತಿಳಿದ ಜಿಯೋ ಈಗ ಕಡಿಮೆ ಬೆಲೆಯಲ್ಲೇ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್  ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, ಈ ಸ್ಮಾರ್ಟ್‍ಫೋನ್ ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ ಎಂದು ಹೇಳಿದ್ದಾರೆ.

2017ರ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್  ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಜಿಯೋ ಕಂಪನಿ ಮತ್ತು ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲಿದೆ ಎಂದು ಟೆಕ್ ಮೂಲಗಳ ಮಾಹಿತಿಯನ್ನು ಆಧರಿಸಿ ಅಂದೇ ವರದಿ ಪ್ರಕಟವಾಗಿತ್ತು.

ಫೋನಿನಲ್ಲಿ ಏನಿರಲಿದೆ?
ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್ ಗಳಿರುವ ಸ್ಮಾರ್ಟ್ ಕ್ಯಾಮೆರಾ ಇರಲಿದೆ. ಗೂಗಲ್ ಹಾಗೂ ಜಿಯೋ ಅಪ್ಲಿಕೇಶನ್ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿರುವ ಆಪ್ ಗಳನ್ನು ಬಳಸಬಹುದಾಗಿದೆ.

ಕಡಿಮೆ ಬೆಲೆಯ ಫೋನಿನಲ್ಲಿ ಕ್ಯಾಮೆರಾ ಗುಣಮಟ್ಟ ಅಷ್ಟೇನೂ ಉತ್ತಮ ಇರುವುದಿಲ್ಲ. ಆದರೆ ಗೂಗಲ್ ಈ ಫೋನಿಗೆ ಫಾಸ್ಟ್ ಹೈ ಕ್ವಾಲಿಟಿ ಕ್ಯಾಮೆರಾ ನೀಡುವುದಾಗಿ ಹೇಳಿದೆ. ಅಲ್ಲದೇ ಎಚ್‍ಡಿಆರ್ ಮೋಡ್ ಇರಲಿದೆ. ಗೂಗಲ್ ಸ್ನಾಪ್‍ಚಾಟ್ ಜೊತೆಗೂಡಿ ಹೊಸ ಲೆನ್ಸ್ ಅಭಿವೃದ್ಧಿ ಪಡಿಸಿದೆ. ಹೀಗಾಗಿ ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಗೂಗಲ್ ಈ ಜಿಯೋ ಫೋನಿಗೆ ಲೇಟೆಸ್ಟ್ ಆಂಡ್ರಾಯ್ಡ್ ಓಎಸ್ ಭದ್ರತಾ ನವೀಕರಣಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಆದರೆ ಯಾವ ಆಂಡ್ರಾಯ್ ಆವೃತ್ತಿ ಇರಲಿದೆ ಎನ್ನುವುದು ಸಷ್ಟವಾಗಿ ತಿಳಿದು ಬಂದಿಲ್ಲ.  ಇದನ್ನೂ ಓದಿ: ಜಿಯೋದಲ್ಲಿ ಯಾರ ಹೂಡಿಕೆ ಎಷ್ಟಿದೆ?

ಬೆಲೆ ಎಷ್ಟು?
ಜಿಯೋ ಫೋನ್ ಬೆಲೆ ಎಷ್ಟು ಎನ್ನುವುದನ್ನು ಮುಕೇಶ್ ಅಂಬಾನಿ ತಿಳಿಸಿಲ್ಲ. ಆದರೆ ಕಡಿಮೆ ಬೆಲೆ ಎಂಬ ಸುಳಿವು ನೀಡಿದ ಹಿನ್ನೆಲೆಯಲ್ಲಿ 5 ಸಾವಿರ ರೂ. ಒಳಗಡೆ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್‍ಬಿಲ್ಟ್ ಜಿಯೋ ಸಿಮ್ ಇರುವ ಕಾರಣ ಈ ಫೋನ್ ಬಳಕೆದಾರರಿಗೆ ಜಿಯೋ ವಿಶೇಷ ಡೇಟಾ ಪ್ಲ್ಯಾನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಜಿಯೋದಲ್ಲಿ ಈಗಾಗಲೇ ಗೂಗಲ್, ಫೇಸ್‍ಬುಕ್ ಅಲ್ಲದೇ ಚಿಪ್ ತಯಾರಕ ಕಂಪನಿಗಳಾದ ಕ್ವಾಲಕಂ ಮತ್ತು ಇಂಟೆಲ್ ಹೂಡಿಕೆ ಮಾಡಿದೆ. ಹೀಗಾಗಿ ಹಾರ್ಡ್‍ವೇರ್ ವಿಚಾರದಲ್ಲಿ ಫೋನ್ ತಯಾರಿಕೆಗೆ ಈ ಹೂಡಿಕೆ ನೆರವಾಗಬಹುದು. ಆಪರೇಟಿಂಗ್ ಸಿಸ್ಟಂ ವಿಚಾರದಲ್ಲಿ ಗೂಗಲ್ ಹೇಗೂ ಸಹಾಯ ಮಾಡುತ್ತದೆ ಎಂದು ಈಗಾಗಲೇ ಹೇಳಿದೆ.

ಪರಿಣಾಮ ಏನು?
ಈ ಹಿಂದೆ 3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ಭಾರತ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿತ್ತು. ಹೀಗಾಗಿ ವಿಶ್ವದಲ್ಲಿ 4ಜಿ ಬಳಕೆ ಆರಂಭಗೊಂಡಿದ್ದರೂ ಭಾರತದ ಹಲವು ನಗರಗಳಲ್ಲಿ 3ಜಿ, ಗ್ರಾಮೀಣ ಭಾಗದಲ್ಲಿ 2ಜಿ ನೆಟ್‍ವರ್ಕ್ ಬಳಕೆ ಇತ್ತು. ದೇಶದಲ್ಲಿ 4ಜಿ ತಡವಾಗಿ ಬರಬಹುದು ಎಂಬ ಕಾರಣಕ್ಕೆ ಭಾರತದ ಫೋನ್ ಕಂಪನಿಗಳು 3ಜಿ ಫೋನ್‍ಗಳತ್ತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದವು. 2016ರಲ್ಲಿ ಜಿಯೋ ಅಧಿಕೃತವಾಗಿ ಆರಂಭಗೊಂಡು 4ಜಿ ಸೇವೆ ಬಿಡುಗಡೆ ಮಾಡಿ ಸ್ಮಾರ್ಟ್‍ಫೋನ್ ಮತ್ತು ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿತ್ತು. ಇದರಿಂದಾಗಿ 4ಜಿ ಸ್ಮಾರ್ಟ್‍ಫೋನ್ ತಯಾರಿಸುತ್ತಿದ್ದ ವಿಶ್ವದ ಹಲವು ಕಂಪನಿಗಳಿಗೆ ನೆರವಾಗಿದ್ದರೆ ಭಾರತದ ಫೋನ್‍ಗಳು ಸ್ಪರ್ಧಿಸಲಾಗದೇ ರೇಸ್‍ನಿಂದಲೇ ಹೊರಬಿದ್ದಿತ್ತು.

ಈಗ ದೇಶದಲ್ಲಿ 5ಜಿ ಪ್ರಯೋಗಗಳು ನಡೆಯುತ್ತಿದೆ. 4ಜಿ ಫೋನ್‍ಗಳದ್ದೇ ಮಾರುಕಟ್ಟೆಯಲ್ಲಿ ಹವಾ ಜೋರಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಸೇವೆ ನೀಡಿದರೆ ಕ್ಲಿಕ್ ಆಗುತ್ತದೆ ಎಂಬ ಜಿಯೋದ ಡೇಟಾ ಪ್ರಯೋಗ ಈಗಾಗಲೇ ಯಶಸ್ವಿಯಾಗಿದೆ. ಹೀಗಾಗಿ ಕಡಿಮೆ ಬೆಲೆಯ ಫೋನ್ ಯಾವ ರೀತಿ ಮಾರುಕಟ್ಟೆಯನ್ನು ಶೇಕ್ ಮಾಡಬಹುದು ಎಂಬ ಕುತೂಹಲ ಮೂಡಿದೆ.

ಹೊಸದೆನಲ್ಲ:
ಕಡಿಮೆ ಬೆಲೆಯಲ್ಲಿ ಆಂಡಾಯ್ಡ್ ಫೋನ್ ಗಳನ್ನು ಬಿಡುಗಡೆ ಮಾಡುವ ಸಂಬಂಧ ಗೂಗಲ್ ಫೋನ್  ತಯಾರಕಾ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು ಹೊಸದೆನಲ್ಲ. ಈ ಹಿಂದೆ 2014ರಲ್ಲಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಆಂಡ್ರಾಯ್ಡ್ ಫೋನ್ ಮಾರುಕಟ್ಟೆ ಹೆಚ್ಚಿಸಲು ‘ಆಂಡ್ರಾಯ್ಡ್ ಒನ್’ ಓಎಸ್ ಬಿಡುಗಡೆ ಮಾಡಿತ್ತು. ಮೈಕ್ರೋಮ್ಯಾಕ್ಸ್, ಕಾರ್ಬನ್, ಲಾವಾ, ಸ್ಫೈಸ್, ಕ್ಸಿಯೋಮಿ, ನೋಕಿಯಾ ಕಂಪನಿಗಳು ಈ ಓಎಸ್ ಅಡಿಯಲ್ಲಿ ಫೋನ್  ಬಿಡುಗಡೆ ಮಾಡಿತ್ತು.

ಸ್ಟಾಕ್ ಆಂಡ್ರಾಯ್ಡ್ (ಶುದ್ಧವಾದ ಆಂಡ್ರಾಯ್ಡ್ ಓಸ್. ಸ್ಟಾಕ್ ಆಂಡ್ರಾಯ್ಡ್ ಇದ್ದಲ್ಲಿ ಗೂಗಲ್ ಅಪ್‍ಡೇಟ್ ಮಾಡಿದ ಕೂಡಲೇ ಓಎಸ್ ಅಪ್‍ಡೇಟ್ ಸಿಗುತ್ತದೆ. ಕಸ್ಟಮಸ್ಡ್ ಆಂಡ್ರಾಯ್ಡ್ ಓಎಸ್ ಆದ್ರೆ ಕಂಪನಿಗಳು ಅಪ್‍ಡೇಟ್ ನೀಡಬೇಕಾಗುತ್ತದೆ) ಆಗಿದ್ದ ಕಾರಣ ಸ್ಮಾರ್ಟ್ ಫೋನ್  ಮಾರುಕಟ್ಟೆಯಲ್ಲಿ ಕ್ಲಿಕ್ ಆಗಿತ್ತು.

ಇದಾದ ಬಳಿಕ 2019ರಲ್ಲಿ ಗೂಗಲ್ ಕಡಿಮೆ ಬೆಲೆಯಲ್ಲಿ ಫೋನ್  ಬಿಡುಗಡೆ ಮಾಡಲು ಆಂಡ್ರಾಯ್ಡ್ ಗೋ ಹೆಸರಿನ ಓಎಸ್ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್ ಗೋ ಎಂಬುದು ಅತ್ಯಂತ ಲಘುವಾದ ಆಂಡ್ರಾಯ್ಡ್ ಆವೃತ್ತಿ. ಕಡಿಮೆ ಮೆಮೊರಿ, ವೈಶಿಷ್ಟ್ಯಗಳೂ ಸೀಮಿತ ಮತ್ತು ಅದರ ಕಾರ್ಯಾಚರಣೆಗೆ ಕಡಿಮೆ ರ‍್ಯಾಮ್ ಸಾಕಾಗಿತ್ತು. ಈ ಆಪರೇಟಿಂಗ್ ಸಿಸ್ಟಂಗೆ 2 ಜಿಬಿ ರ‍್ಯಾಮ್ ಅಥವಾ ಅದಕ್ಕಿಂತ ಕಡಿಮೆ ಗಾತ್ರದ ರ‍್ಯಾಮ್ ಇರುವ ಫೋನ್  ಸಾಕಾಗಿತ್ತು.

Leave a Reply

Your email address will not be published. Required fields are marked *

Back to top button