– ಉಕ್ಕಿನ ಕಂಪನಿಗಳ ಪ್ರತಿನಿಧಿಗಳೊಂದಿಗೆ ನಿರಾಣಿ ಸಭೆ
ಬೆಂಗಳೂರು: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು ಪೂರೈಕೆ ಮಾಡಲು ಜೆಎಸ್ಡಬ್ಲ್ಯೂ ಸ್ಟೀಲ್ ಕಂಪನಿ (ಜಿಂದಾಲ್) ಒಪ್ಪಿಕೊಂಡಿದೆ.
ಮಂಗಳವಾರ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಜೆಎಸ್ಡಬ್ಲ್ಯೂ ಸ್ಟೀಲ್ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ನೇತೃತ್ವದ ಪ್ರತಿನಿಧಿಗಳ ಸಭೆಯ ಬಳಿಕ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು.
Advertisement
ಕೋವಿಡ್-19 ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಅಪಾರ ಸಂಖ್ಯೆಯ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ದಾಖಲಾದ ರೋಗಿಗಳಿಗೆ ಆಮ್ಲಜನಕದ ಪೂರೈಕೆಯ ಕೊರತೆಯು ಗಂಭೀರ ಸ್ಥಿತಿಯಲ್ಲಿದೆ ಎಂದು ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
Advertisement
Advertisement
ಆಮ್ಲಜನಕದ ಪೂರೈಕೆಯ ಕೊರತೆಯಿಂದ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿದೆ. ರಾಜ್ಯದಲ್ಲಿ ಹದಗೆಟ್ಟ ಪರಿಸ್ಥಿತಿಯ ಮಧ್ಯೆ ಸಚಿವ ಮುರುಗೇಶ್ ನಿರಾಣಿ ಅವರು ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಭೆಯಲ್ಲಿ ಮುಂದಿಟ್ಟರು.
Advertisement
ಉಕ್ಕಿನ ಉತ್ಪಾದನೆಯಲ್ಲಿ ಅವುಗಳ ಬಳಕೆಗಾಗಿ ತಮ್ಮ ಸಂಸ್ಥೆಗಳಲ್ಲಿ ದ್ರವೀಕೃತ ಆಮ್ಲಜನಕವನ್ನು ಉತ್ಪಾದಿಸುವ ಹಲವಾರು ಉಕ್ಕಿನ ಕಂಪನಿಗಳ ಪ್ರತಿನಿಧಿಗಳೊಂದಿಗೆ ಅವರು ಸಭೆ ನಡೆಸಿ ರಾಜ್ಯದ ವಸ್ತು ಸ್ಥಿತಿಯನ್ನು ಸಭೆಯ ಮುಂದಿಟ್ಟರು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಪರಿಹರಿಸಲು ಬೃಹತ್ ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.
ಸಭೆಯಲ್ಲಿ ಹಾಜರಿದ್ದ ಜೆಎಸ್ಡಬ್ಲ್ಯು ಸ್ಟೀಲ್ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ಅವರು ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು ಪೂರೈಸಲು ಸಮ್ಮತಿಸಿದರು. ಈ ಬಿಕ್ಕಟ್ಟನ್ನು ನಿಭಾಯಿಸಲು ಕರ್ನಾಟಕ ಸರ್ಕಾರಕ್ಕೆ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ನಮ್ಮ ಕಂಪನಿಗಳ ಬದ್ಧತೆ ಕರ್ನಾಟಕದ ಕಡೆಗೆ. ಬೇಡಿಕೆ ಎದುರಾದರೆ ನಾವು ಹೆಚ್ಚು ಆಮ್ಲಜನಕವನ್ನು ಪೂರೈಸಲು ಸಿದ್ಧರಾಗಿದ್ದೇವೆ ಎಂದು ನೋವಲ್ ಸಭೆಯ ನಂತರ ಹೇಳಿದರು.
ಹಲವಾರು ಸ್ಟೀಲ್ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಕೋವಿಡ್19 ನಿಂದ ಉಂಟಾದ ತುರ್ತು ಪರಿಸ್ಥಿತಿಯಿಂದ ಆಸ್ಪತ್ರೆಗಳಿಗೆ ಸಹಾಯವಾಗಲು ಆಕ್ಸಿಜನ್ ನೀಡಲು ಕೇಳಿಕೊಂಡೆನು.JSW Steel ಅವರು,ಪ್ರತಿ ದಿನ ರಾಜ್ಯಕ್ಕೆ 400ಟನ್ ಲಿಕ್ವಿಡ್ ಆಕ್ಸಿಜನ್ ನೀಡಲು ಒಪ್ಪಿಕೊಂಡರು.ನಾನು ಡಾ.@vnowal ಡಿ.ವೈ ಎಂ.ಡಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ pic.twitter.com/NA2DeGQDOl
— Dr. Murugesh R Nirani (@NiraniMurugesh) April 20, 2021
ನಿರ್ಣಾಯಕ ಹಂತದಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ತಯಾರಿಸಲು ಮತ್ತು ಪೂರೈಸಲು ಉಕ್ಕಿನ ಕಂಪನಿಗಳು ಮುಂದಾಗಿವೆ ಎಂದು ಸಚಿವ ನಿರಣಿ ಹೇಳಿದರು. ಸಾಂಕ್ರಾಮಿಕ ರೋಗವು ನಮ್ಮ ವ್ಯವಸ್ಥೆಗೆ ದೊಡ್ಡ ಸವಾಲುಗಳನ್ನು ಸೃಷ್ಟಿಸಿದೆ. ಇದು ಅನೇಕ ಕುಟುಂಬಗಳಿಗೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಮಾರಣಾಂತಿಕ ವೈರಸನ್ನು ಹಿಮ್ಮೆಟ್ಟಿಸಲು ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.