LatestMain PostSports

ಜಹೀರ್ ಖಾನ್ ಹಿಂದಿಕ್ಕಿ ಐಪಿಎಲ್‍ನಲ್ಲಿ ದಾಖಲೆ ಬರೆದ ಸಂದೀಪ್ ಶರ್ಮಾ

ಶಾರ್ಜಾ: ಅನುಭವಿ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಹಿಂದಿಕ್ಕಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ಫಾಸ್ಟ್ ಬೌಲರ್ ಸಂದೀಪ್ ಶರ್ಮಾ ಹೊಸ ದಾಖಲೆಯನ್ನು ಬರೆದಿದ್ದಾರೆ.

ಇಂದು ನಡೆಯುತ್ತಿರುವ ಐಪಿಎಲ್-2020 56ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಶಹಬಾಜ್ ನದೀಮ್ ಮತ್ತು ಸಂದೀಪ್ ಶರ್ಮಾ ಅವರ ದಾಳಿಗೆ ತತ್ತರಿಸಿ ಹೈದರಾಬಾದ್ ತಂಡಕ್ಕೆ 150 ರನ್‍ಗಳ ಗುರಿ ನೀಡಿದೆ.

ಸಂದೀಪ್ ಶರ್ಮಾ ದಾಖಲೆ
ಇಂದು ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಸಂದೀಪ್ ಶರ್ಮಾ 34 ರನ್ ನೀಡಿ 3 ವಿಕೆಟ್ ಕಿತ್ತು ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯ ಪವರ್ ಪ್ಲೇ ಅವಧಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಪವರ್ ಪ್ಲೇ ಸಮಯದಲ್ಲೇ ಸಂದೀಪ್ ಶರ್ಮಾ ತನ್ನ ಸ್ವಿಂಗ್ ಮೂಲಕ ಬರೋಬ್ಬರಿ 55 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ 52 ವಿಕೆಟ್ ಕಿತ್ತಿರುವ ಜಹೀರ್ ಖಾನ್ ಮತ್ತು 48 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇದ್ದಾರೆ.

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಇಷ್ಟು ದಿನ ವಿಶ್ರಾಂತಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ ಇಂದು ಮೈದಾನದಲ್ಲಿ ಕಮಾಲ್ ಮಾಡಲಿಲ್ಲ. ಕೇವಲ 4 ರನ್‍ಗಳಿಸಿ ಔಟ್ ಆದರು. ನಂತರ 25 ರನ್ ಗಳಿಸಿ ಕ್ವಿಂಟನ್ ಡಿ ಕಾಕ್ ಸಂದೀಪ್ ಶರ್ಮಾ ಅವರಿಗೆ ಬೌಲ್ಡ್ ಆದರು. 29 ಬಾಲಿಗೆ 36 ರನ್ ಸಿಡಿಸಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ನದೀಮ್‍ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

ನಂತರ ಬಂದ ಕ್ರುನಾಲ್ ಪಾಂಡ್ಯ ಶೂನ್ಯ ಸುತ್ತಿದರೆ, ಸೌರಭ್ ತಿವಾರಿ ಒಂದು ರನ್ ಹೊಡೆದು ವಿಕೆಟ್ ಒಪ್ಪಿಸಿದರು. 33 ರನ್ ಗಳಿಸಿದ್ದ ಇಶಾನ್ ಕಿಶನ್ ಅವರು ಔಟ್ ಆದರು. ಅವರ ಬೆನ್ನಲ್ಲೇ ನಾಥನ್ ಕೌಲ್ಟರ್-ನೈಲ್ ಅವರು ನಿರ್ಗಮಿಸಿದರು. ನಂತರ ಕೊನೆಯ ಓವರಿನಲ್ಲಿ 41 ರನ್ ಗಳಸಿದ್ದ ಕೀರನ್ ಪೊಲಾರ್ಡ್ ಔಟ್ ಆದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಹೈದರಾಬಾದ್ ತಂಡಕ್ಕೆ 150 ರನ್‍ಗಳ ಟಾರ್ಗೆಟ್ ನೀಡಿದೆ.

Leave a Reply

Your email address will not be published. Required fields are marked *

Back to top button