ಚಿಕ್ಕಬಳ್ಳಾಪುರ: ಜಿಲ್ಲೆಯ ಸೂಸೆಪಾಳ್ಯದ ಬೆಟ್ಟದ ಮೇಲೆ ಅಕ್ರಮವಾಗಿ ತಲೆ ಎತ್ತಿದ್ದ ಶಿಲುಬೆಯನ್ನ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ಸ್ಥಳೀಯ ಕ್ರೈಸ್ತ ಸಮುದಾಯದವರ ವಿರೋಧದ ನಡುವೆಯೂ ತೆರವುಗೊಳಿಸುವ ಕಾರ್ಯ ನಡೆಸಿತು.
ಪೊಲೀಸ್ ಬಂದೋಬಸ್ತ್ನೊಂದಿಗೆ ಬೆಟ್ಟದ ಮೇಲೆ ಸರ್ಕಾರಿ ಗೋಮಾಳ ಜಾಗದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಬೃಹತ್ ಗಾತ್ರದ ಶಿಲುಬೆಯನ್ನ ತೆರವು ಮಾಡಲಾಯಿತು. ಕೆಲವರು ಸರ್ಕಾರಿ ಗೋಮಾಳ ಜಾಗದಲ್ಲಿ ಅನಧಿಕೃವಾಗಿ ಶಿಲುಬೆ ನಿರ್ಮಾಣ ವಿರೋಧಿಸಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದಮ್ಮೆ ದಾಖಲಿಸಿದ್ದರು. ಪರಿಣಾಮ ನ್ಯಾಯಾಲಯ ಶಿಲುಬೆ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.
Advertisement
Advertisement
ಹೈಕೋರ್ಟಿನ ಆದೇಶದ ಮೇರೆಗೆ ಇಂದು ಎ.ಸಿ.ರಘುನಂದನ್ ನೇತೃತ್ವದಲ್ಲಿ ಶಿಲುಬೆಯನ್ನ ತೆರವು ಮಾಡಿ ಜಾಗವನ್ನ ಸರ್ಕಾರದ ವಶಕ್ಕೆ ಪಡೆಯಲಾಯಿತು. ಆದರೆ ಇದಕ್ಕೆ ಅಲ್ಲಿನ ಸ್ಥಳೀಯ ಕ್ರೈಸ್ತ ಸಮುದಾಯದವರು ವಿರೋಧಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಶಿಲುಬೆ ತೆರವು ಕಾರ್ಯಾಚರಣೆಗೆ ಭಾರೀ ವಿರೋಧ ವ್ಯಕ್ತವಾಗುವ ಮುನ್ಸೂಚನೆ ಇದ್ದ ಕಾರಣ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ನೂರಾರು ಜನ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರು.
Advertisement
Advertisement
ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕ್ರೈಸ್ತ ಸಮುದಾಯದ ನೂರಾರು ಜನ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ. ಇದರಿಂದ ಕ್ರೈಸ್ತ ಸಮುದಾಯದ ನೂರಾರು ಜನ ಪ್ರತಿಭಟನಾ ಸ್ಥಳ ಹಾಗೂ ಚರ್ಚ್ ಬಳಿ ಏಸುವನ್ನು ಪ್ರಾರ್ಥಿಸಿ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.