ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ ತಿಹಾರ್ ಜೈಲಿನಿಂದ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸೋಮವಾರ ತಿಹಾರ್ ಜೈಲಿನ ಅಧಿಕಾರಿ ಛೋಟಾ ರಾಜನ್ ಕೊರೊನಾ ಸೋಂಕಿಗೆ ತುತ್ತಾಗಿರೋದನ್ನ ನ್ಯಾಯಾಲಯಕ್ಕೆ ತಿಳಿದರು. ಅನಾರೋಗ್ಯ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ರಾಜನ್ ಗೆ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.
2015ರಲ್ಲಿ ಇಂಡೋನೇಷ್ಯಾದ ಬಾಲಿ ಪೊಲೀಸರು ಛೋಟಾ ರಾಜನ್ ನನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಅಂದಿನಿಂದ ರಾಜನ್ ತಿಹಾರ್ ಜೈಲಿನಲ್ಲಿದ್ದಾನೆ. ರಾಜನ್ ವಿರುದ್ಧ ಪ್ರಕರಣ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸೋಮವಾರ ವಿಚಾರಣೆ ಹಿನ್ನೆಲೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಛೋಟಾ ರಾಜನ್ ನನ್ನು ಹಾಜರುಪಡಿಸಿರಲಿಲ್ಲ. ರಾಜನ್ಗೆ ಕೋವಿಡ್ ಸೋಂಕು ತಗುಲಿದ್ದರಿಂದ ವಿಚಾರಣೆಗೆ ಹಾಜರು ಪಡಿಸಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.
ಛೋಟಾ ರಾಜನ್ನನ್ನು 2015ರ ಅಕ್ಟೋಬರ್ ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ಬಂಧಿಸಿದ್ದರು. ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. 75 ಅಪರಾಧಗಳ ಪೈಕಿ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಮಹರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ 20 ಕ್ಕೂ ಹೆಚ್ಚು ಪ್ರಕರಣಗಳು ರಾಜನ್ ವಿರುದ್ಧ ದಾಖಲಾಗಿದೆ.
ಏನಿದು ಪ್ರಕರಣ:
ನಂದು ವಾಜೆಕರ್ ಎಂಬ ಬಿಲ್ಡರ್ 2015 ರಲ್ಲಿ ಪುಣೆಯಲ್ಲಿ ಜಮೀನು ಖರೀದಿಸಿದ್ದನು. ಪರಮಾನಂದ ಠಕ್ಕರ್ ಎಂಬ ಏಜೆಂಟನಿಗೆ 2 ಕೋಟಿ ಕೊಡಬೇಕಾಗಿತ್ತು. ಆದರೆ ಪರಮಾನಂದ ಠಕ್ಕರ್ ಹೆಚ್ಚಿನ ಹಣವನ್ನು ಬೇಡಿಕೆಯಿಟ್ಟಿದ್ದಾನೆ. ಈ ಬೇಡಿಕೆಗೆ ವಾಜೇಕರ್ ಒಪ್ಪಲಿಲ್ಲ. ನಂತರ ಪರಮಾನಂದ ಠಕ್ಕರ್ ಛೋಟಾ ರಾಜನ್ನನ್ನು ಸಂಪರ್ಕಿಸಿ ಈ ಡೀಲ್ ಮಾಡುವಂತೆ ಹೇಳಿದ್ದನು. ನಂತರ ಛೋಟಾ ರಾಜನ್ ಬಿಲ್ಡರ್ ನಂದು ವಾಜೆಕರ್ಗೆ 26 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದನು. ಹಣವನ್ನು ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.