CricketLatestMain PostSportsUncategorized

ಚೆನ್ನೈ ಜೊತೆ ಪಂಜಾಬ್ ಕೂಡ ಟೂರ್ನಿಯಿಂದ ಹೊರಕ್ಕೆ – ಸಿಎಸ್‍ಕೆಗೆ 9 ವಿಕೆಟ್‍ಗಳ ಜಯ

– ಬ್ಯಾಟ್ಸ್​ಮನ್ ಆಗಿ ಗೆದ್ದರೂ ನಾಯಕನಾಗಿ ಸೋತ ರಾಹುಲ್
– ಪ್ಲೆಸಿಸ್, ಗಾಯಕ್ವಡ್ ಸೂಪರ್ ಆಟ

ಅಬುಧಾಬಿ: ಇಂದು ನಡೆದ ಬೊಂಬಾಟ್ ಭಾನುವಾರದ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಜೊತೆ ಪಂಜಾಬ್ ತಂಡವನ್ನು ಕೂಡ ಐಪಿಎಲ್-2020ಯಿಂದ ಹೊರಕ್ಕೆ ಕರೆದುಕೊಂಡು ಹೊರಟಿದೆ.

ಇಂದು ಅಬುಧಾಬಿ ಮೈದಾನದಲ್ಲಿ ನಡೆದ 53ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆದು ಮಧ್ಯಮ ಕ್ರಮಾಂಕದಲ್ಲಿ ಕುಸಿದಿತು. ಆದರೆ ಕೊನೆಯಲ್ಲಿ ದೀಪಕ್ ಹೂಡಾ ಸ್ಫೋಟಕ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 154 ರನ್ ಪೇರಿಸಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಫಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಡ್ ಅದ್ಭುತ ಜೊತೆಯಾಟದಿಂದ ಇನ್ನೂ 7 ಬಾಲು ಉಳಿದಂತೆ ಗೆದ್ದು ಬೀಗಿತು.

ಹೊರಕ್ಕೆ ಬಿದ್ದ ಪಂಜಾಬ್, ಚೆನ್ನೈ
53 ಪಂದ್ಯಗಳು ಕಳೆದರು ಈ ಬಾರಿಯ ಐಪಿಎಲ್‍ನಲ್ಲಿ ಪ್ಲೇ ಆಫ್ ತಲುಪುವ ನಾಲ್ಕು ತಂಡಗಳು ಅಂತಿಮವಾಗಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ಗೆದ್ದ ಚೆನ್ನೈ ಮತ್ತು ಸೋತ ಪಂಜಾಬ್ ತಂಡಗಳೆರಡು ಟೂರ್ನಿಯಿಂದ ಹೊರಬಿದ್ದಿವೆ. ಮುಂಬೈ ಇಂಡಿಯನ್ಸ್ ಏಕೈಕ ತಂಡ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಪಂಜಾಬ್ ತಂಡ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೆ ರನ್‍ರೇಟ್ ಆಧಾರದ ಮೇಲೆ ಪ್ಲೇ ಆಫ್ ತಲುಪುವ ಅವಕಾಶವಿತ್ತು.

154 ರನ್‍ಗಳ ಗುರಿಯನ್ನು ಬೆನ್ನಟ್ಟಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಫಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಡ್ ಮೊದಲ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ತಂಡ ಒಂದು ವಿಕೆಟ್ ಕಳೆದುಕೊಳ್ಳದೇ ಬರೋಬ್ಬರಿ 57 ರನ್ ಸಿಡಿಸಿತು.

ಹೀಗೆ ಆಟ ಮುಂದುವರಿಸಿದ ಈ ಜೋಡಿ 59 ಬಾಲಿಗೆ 82 ರನ್‍ಗಳ ಜೊತೆಯಾಟವಾಡಿತು. ಆದರೆ 34 ಬಾಲಿಗೆ 48 ರನ್‍ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಫಫ್ ಡು ಪ್ಲೆಸಿಸ್ ಅವರು ಕ್ರಿಸ್ ಜೋರ್ಡಾನ್ ಅವರಿಗೆ ಔಟ್ ಆಗಿ ಹೊರನಡೆದರು. ನಂತರ ಜೊತೆಯಾದ ರುತುರಾಜ್ ಗಾಯಕ್ವಡ್ ಅಂಬಾಟಿ ರಾಯುಡು ಚೆನ್ನೈ ತಂಡವನ್ನು 100ರ ಗಡಿ ದಾಟಿಸಿ ಗೆಲುವಿನ ಹತ್ತಿರಕ್ಕೆ ಕರೆದುಕೊಂಡು ಬಂದರು.

ಇದರ ನಡುವೆ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ರುತುರಾಜ್ ಗಾಯಕ್ವಡ್ 38 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ತದನಂತರ 54 ಬಾಲಿಗೆ 72 ರನ್‍ಗಳ ಜೊತೆಯಾಟವಾಡಿ ಔಟ್ ಆಗದೇ ಉಳಿದ ರುತುರಾಜ್ ಗಾಯಕ್ವಡ್ ಮತ್ತು ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂಬಾಟಿ ರಾಯುಡು 30 ಮತ್ತು ಗಾಯಕ್ವಡ್ 62 ರನ್ ಹೊಡೆದು ನಾಟೌಟ್ ಆಗಿ ಉಳಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ತಂಡ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದ ಯಾವುದೇ ಬ್ಯಾಟ್ಸ್‍ಮನ್ ಕೂಡ ಪಂಜಾಬ್ ಪರ ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಆದರೆ ಕೊನೆಯಲ್ಲಿ ಅದ್ಭುತವಾಗಿ ಆಡಿದ ದೀಪಕ್ ಹೂಡಾ 30 ಬಾಲ್‍ನಲ್ಲಿ ನಾಲ್ಕು ಸಿಕ್ಸ್ ಮತ್ತು ಮೂರು ಫೋರ್ ಸಮೇತ 61 ರನ್ ಸಿಡಿಸಿದರು. ಹೀಗಾಗಿ ಪಂಜಾಬ್ ತಂಡ ಚೆನ್ನೈಗೆ 154 ರನ್‍ಗಳ ಟಾರ್ಗೆಟ್ ನೀಡಿತ್ತು.

Leave a Reply

Your email address will not be published. Required fields are marked *

Back to top button