ಕ್ಯಾಲಿಫೋರ್ನಿಯಾ: ಗಲ್ವಾನ್ ಘರ್ಷಣೆಯ ಬಳಿಕ ಭಾರತ ಸರ್ಕಾರ ಚೀನಾದ 59 ಅಪ್ಲಿಕೇಶನ್ಗಳನ್ನು ನಿಷೇಧಿಸಿ ‘ಡಿಜಿಟಲ್ ಸ್ಟ್ರೈಕ್’ ಮಾಡುವ ಮೂಲಕ ಶಾಕ್ ನೀಡಿತ್ತು. ಈಗ ಕೊರೊನಾ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸರಿಯಾಗಿ ಹಂಚಿಕೊಳ್ಳದ್ದಕ್ಕೆ ವಿಶ್ವದ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ಅಮೆರಿಕದ ಕಂಪನಿಗಳು ಚೀನಾ ಮೇಲೆ ‘ಹಾರ್ಡ್ವೇರ್ ಸ್ಟ್ರೈಕ್’ ಮಾಡಲು ಆರಂಭಿಸಿವೆ.
ಅಮೆರಿಕದ ಟ್ರಂಪ್ ಸರ್ಕಾರ ಮೊದಲಿನಿಂದಲೂ ವ್ಯಾಪಾರ ವಿಚಾರದಲ್ಲಿ ಚೀನಾ ವಿರುದ್ಧ ಕಿಡಿ ಕಾರುತ್ತಲೇ ಬಂದಿದೆ. ಈಗ ಕೊರೊನಾ ವೈರಸ್ ಸೃಷ್ಟಿಯಾದ ಬಳಿಕ ಗಲಾಟೆ ಮತ್ತಷ್ಟು ಜೋರಾಗಿದೆ. ಇದರ ಜೊತೆ ಯುರೋಪಿಯನ್ ಒಕ್ಕೂಟಗಳು ಸಹಾ ಚೀನಾ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಚೀನಾದಲ್ಲಿ ಹೂಡಿಕೆ ಮಾಡುವ ಬದಲು ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ.
Advertisement
Advertisement
ಈ ನಿಟ್ಟಿನಲ್ಲಿ ಮೊದಲು ಎನ್ನುವಂತೆ ಆಪಲ್ ಐಫೋನ್ ತಯಾರಿಸುವ ಫಾಕ್ಸ್ಕಾನ್ ಕಂಪನಿ ತಮಿಳುನಾಡಿನಲ್ಲಿ 1 ಶತಕೋಟಿ ಡಾಲರ್ ಹೂಡಿಕೆ ಮಾಡಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
Advertisement
ಫಾಕ್ಸ್ಕಾನ್ ತೈವಾನ್ ಮೂಲದ ಕಂಪನಿಯಾಗಿದ್ದರೂ ಚೀನಾದ ಘಟಕದಲ್ಲಿ ಐಫೋನ್ಗಳನ್ನು ತಯಾರಿಸುತ್ತಿತ್ತು. ಈಗ ಚೀನಾ ಬಿಟ್ಟು ಹೊರ ದೇಶದಲ್ಲಿ ಘಟಕ ಸ್ಥಾಪನೆಗೆ ಹೂಡಿಕೆ ಮಾಡುತ್ತಿರುವುದಾಗಿ ತಿಳಿಸಿದೆ.
Advertisement
ಈ ಸಂಬಂಧ ಮಾಧ್ಯಮಕ್ಕೆ ಫಾಕ್ಸ್ಕಂಪನಿಯ ಮೂಲವೊಂದು ಪ್ರತಿಕ್ರಿಯಿಸಿ, ಆಪಲ್ ಕಂಪನಿಯ ಬಲವಾದ ಬೇಡಿಕೆ ಹಿನ್ನೆಲೆಯಲ್ಲಿ ಚೀನಾದ ಬದಲು ಬೇರೆ ಕಡೆ ಐಫೋನ್ ಭಾಗಗಳ ಉತ್ಪಾದನೆಗೆ ಮುಂದಾಗುತ್ತಿದ್ದೇವೆ ಎಂದು ತಿಳಿಸಿದೆ.
ಈ ವಿಚಾರದ ಬಗ್ಗೆ ಆಪಲ್, ಫಾಕ್ಸ್ಕಾನ್ ಕಂಪನಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮೂಲಗಳ ಪ್ರಕಾರ ಫಾಕ್ಸ್ಕಾನ್ ಕಂಪನಿ ಪ್ರಸ್ತುತ ಐಫೋನ್ ಎಕ್ಸ್ಆರ್ ಫೋನ್ ತಯಾರಿಸುತ್ತಿರುವ ಶ್ರೀಪೆರುಂಬುದೂರ್ ಪಟ್ಟಣದಲ್ಲಿರುವ ಘಟಕವನ್ನು ವಿಸ್ತರಣೆ ಮಾಡುವ ಸಂಬಂಧ ಹೂಡಿಕೆ ಮಾಡುತ್ತಿದೆ. ಅಷ್ಟೇ ಅಲ್ಲದೇ ಆಂಧ್ರಪ್ರದೇಶದಲ್ಲಿ ಘಟಕ ತೆರೆಯಲು ಫಾಕ್ಸ್ಕಾನ್ ಮುಂದಾಗಿದೆ. ಒಟ್ಟು 6 ಸಾವಿರ ಮಂದಿಗೆ ಇದರಿಂದ ಉದ್ಯೋಗ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಡಿಜಿಟಲ್ ಸ್ಟ್ರೈಕ್ ಬಳಿಕ ಮತ್ತೊಂದು ಭಾರೀ ಹೊಡೆತ ನೀಡಲು ಭಾರತ ಸಿದ್ಧತೆ
ಕಳೆದ ತಿಂಗಳು ತೈವಾನ್ ಮೂಲದ ಫಾಕ್ಸ್ಕಾನ್ ಕಂಪನಿಯ ಮುಖ್ಯಸ್ಥ ಲಿಯು ಯುಂಗ್ ಯಾವುದೇ ಮಾಹಿತಿ ನೀಡದೇ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದರು.
ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆಪಲ್ ಶೇ.1ರಷ್ಟು ಪಾಲನ್ನು ಹೊಂದಿದೆ. ಆಪಲ್ ಉತ್ಪನ್ನಗಳು ವಿದೇಶದಿಂದ ಆಮದು ಆಗುತ್ತಿದ್ದು, ಆಮದು ಸುಂಕ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಐಫೋನ್ ಸೇರಿದಂತೆ ಇತರ ಉತ್ಪನ್ನಗಳ ಬೆಲೆ ಜಾಸ್ತಿಯಿದೆ. ಭಾರತದಲ್ಲಿ ಉತ್ಪಾದಿಸಿದರೆ ಆಮದು ಸುಂಕವೇ ಇರದ ಕಾರಣ ಐಫೋನ್ ಬೆಲೆ ಕಡಿಮೆಯಾಗಿ ಮಾರುಕಟ್ಟೆ ವಿಸ್ತರಣೆಯಾಗಬಹುದು ಎಂಬ ಲೆಕ್ಕಾಚಾರವನ್ನು ಆಪಲ್ ಹಾಕಿಕೊಂಡಿದೆ.
ಈಗಾಗಲೇ ಆಪಲ್ ಕಂಪನಿ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯ ಮೂಲಕ ಬೆಂಗಳೂರಿನಲ್ಲಿ ಘಟಕವನ್ನು ಸ್ಥಾಪಿಸಿದೆ. 2017ರಲ್ಲಿ ಆರಂಭಗೊಂಡ ಈ ಘಟಕದಲ್ಲಿ ಐಫೋನ್ 6ಎಸ್, 7 ಫೋನ್ಗಳ ಜೋಡಣೆಯಾಗುತ್ತಿದೆ. ಅಷ್ಟೇ ಅಲ್ಲದೇ ಐಫೋನ್ ಒಳಗಡೆ ಇರುವ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ಸ್ಗಳನ್ನು ಜೋಡಣೆ ಮಾಡಲು ಮುಂದಾಗುತ್ತಿದೆ.