Connect with us

Corona

ಚೀನಾವನ್ನು ಹಿಂದಿಕ್ಕಿದ ಭಾರತ – 85 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

Published

on

– 30,153 ಮಂದಿ ಗುಣಮುಖ
– 2,752 ಮಂದಿ ಕಿಲ್ಲರ್ ಕೊರೊನಾಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗಿದ್ದು, ಮೊದಲು ಸೋಂಕು ಕಾಣಿಸಿಕೊಂಡಿದ್ದ ಚೀನಾವನ್ನೇ ಹಿಂದಿಕ್ಕುವ ಮಟ್ಟಿಗೆ ಸೋಂಕಿತರ ಸಂಖ್ಯೆ ಭಾರತದಲ್ಲಿ ಏರಿಕೆಯಾಗಿದೆ. ಈವರೆಗೆ 85,940 ಮಂದಿ ಸೋಂಕಿತರು ಮಹಾಮಾರಿಗೆ ತುತ್ತಾಗಿದ್ದು, 2,752 ಮಂದಿಯನ್ನು ಕೊರೊನಾ ಬಲಿಪಡೆದಿದೆ.

ಈವರೆಗೆ ಕೊರೊನಾದಿಂದ 30,153 ಮಂದಿ ಗುಣಮುಖರಾಗಿದ್ದಾರೆ. 24 ಗಂಟೆಯಲ್ಲಿ 3,970 ಮಂದಿಗೆ ಸೋಂಕು ದೃಢಪಟ್ಟಿದ್ದು, 103 ಮಂದಿ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಅತೀ ಹೆಚ್ಚು ಸೋಂಕಿತರು ಇರುವ ವಿಶ್ವದ ದೇಶಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನಕ್ಕೆ ಏರಿದೆ. 85,940 ಮಂದಿ ಸೋಂಕಿತರಲ್ಲಿ 30,153 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 53,035 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಯಾಗಿದೆ.

2019ರ ನವೆಂಬರ್ 17ರಂದು ಚೀನಾದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಈವರೆಗೆ ಚೀನಾದಲ್ಲಿ 82,947 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 4,633 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 78,219 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿರಬಹುದು, ಆದರೆ ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ ಕಡಿಮೆ ಇರುವುದು ಸದ್ಯ ಸಮಾಧಾನಕರ ಸಂಗತಿಯಾಗಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಮಂದಿ ಕೊರೊನಾಗೆ ತುತ್ತಾಗಿದ್ದು, ಈವರೆಗೆ 1,068 ಕೊರೊನಾ ಮಂದಿಯನ್ನು ಬಲಿಪಡೆದಿದೆ. ಒಟ್ಟು 29,100 ಮಂದಿಗೆ ಈವರೆಗೆ ಸೋಂಕು ತಗುಲಿದ್ದು, ಸುಮಾರು 6,564 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಮಿಳುನಾಡಿನಲ್ಲಿ 10,108 ಮಂದಿಗೆ ಕೊರೊನಾ ತಗುಲಿದ್ದು, 71 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಗುಜರಾತ್‍ನಲ್ಲಿ 9,932 ಮಂದಿ ಸೋಂಕಿಗೆ ತುತ್ತಾಗಿದ್ದು, 606 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 8,895 ಮಂದಿ ಕೊರೊನಾಗೆ ತುತ್ತಾಗಿದ್ದು, 123 ಮಂದಿ ಮೃತಪಟ್ಟಿದ್ದಾರೆ. ಸುಮಾರು 3,518 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ 2,307 ಮಂದಿಗೆ ಸೋಂಕು ತಗುಲಿದ್ದು, 48 ಮಂದಿ ಸಾವನ್ನಪ್ಪಿದ್ದಾರೆ. 1,252 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ತೆಲಂಗಾಣದಲ್ಲಿ 1,454 ಮಂದಿ ಕೊರೊನಾಗೆ ತುತ್ತಾಗಿದ್ದು, 34 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಕೇರಳದಲ್ಲಿ 577 ಮಂದಿಯಲ್ಲಿ ಈವರೆಗೆ ಸೋಂಕು ಕಾಣಿಸಿಕೊಂಡಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. 493 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಈವರೆಗೆ 1,078 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 36ಕ್ಕೆ ಏರಿದೆ. ಒಟ್ಟು 480 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.

Click to comment

Leave a Reply

Your email address will not be published. Required fields are marked *