ತಿರುವನಂತಪುರಂ: ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಿದ್ದರೂ ಯಾವುದಾದರೂ ಒಂದು ಸಾಕ್ಷ್ಯದ ಮೂಲಕ ಸಿಕ್ಕಿಬೀಳುತ್ತಾರೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿರುತ್ತದೆ. ಈಗ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಕೇರಳ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಪುತ್ರಿಯಿಂದಾಗಿ ಈಗ ಸೆರೆ ಸಿಕ್ಕಿದ್ದಾಳೆ.
ಪ್ರಕರಣ ಬಯಲಾಗುತ್ತಿದ್ದಂತೆ ಜುಲೈ 7 ರಿಂದ ನಾಪತ್ತೆಯಾಗಿದ್ದ ಸ್ವಪ್ನ ಶುಕ್ರವಾರದವರೆಗೂ ಕೊಚ್ಚಿಯಲ್ಲೇ ಅಡಗಿದ್ದಳು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸುತ್ತಿದ್ದಂತೆ ಆರೋಪಿಗಳಾದ ಸ್ವಪ್ನ ಸುರೇಶ್ ಮತ್ತು ಸಂದೀಪ್ ನಾಯರ್ ಎಸ್ ಕ್ರಾಸ್ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು.
ಶನಿವಾರ ಬೆಂಗಳೂರಿಗೆ ಬಂದ ಇಬ್ಬರು ಆರಂಭದಲ್ಲಿ ಬಿಟಿಎಂ ಲೇಔಟ್ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ದರು. ಈ ವೇಳೆ ಅವರಿಗೆ ನಮ್ಮ ಪರಿಚಯ ಸಿಗಬಹುದು ಎಂಬ ಕಾರಣಕ್ಕೆ ಆನ್ಲೈನ್ನಲ್ಲಿ ಕೋರಮಂಗಲದಲ್ಲಿರುವ ಹೋಟೆಲ್ ಬುಕ್ ಮಾಡಿದ್ದರು. ಇಬ್ಬರು ಇಲ್ಲಿಯೇ ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಎನ್ಐಎ ಪೊಲೀಸರು ಸಂಜೆ 6:30ಕ್ಕೆ ತೆರಳಿ ಅರೆಸ್ಟ್ ಮಾಡಿದ್ದಾರೆ.
ಸಿಕ್ಕಿ ಬಿದ್ದಿದ್ದು ಹೇಗೆ?
ಸ್ವಪ್ವಸುರೇಶ್ ಕೆಲ ದಿನಗಳ ಹಿಂದೆ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿದ್ದಳು. ಹೀಗಾಗಿ ಫೋನ್ ನಂಬರ್ ಸಿಕ್ಕಿತ್ತು. ಅಷ್ಟೇ ಅಲ್ಲದೇ ಆಕೆ ಬಳಸುತ್ತಿದ್ದ 15 ಮೊಬೈಲ್ಗಳ ಮೇಲೆ ಎನ್ಐಎ ನಿಗಾ ಇಟ್ಟಿತ್ತು. ಆದರೆ ಆಕೆ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಬಂಧನಕ್ಕೆ ಹಿನ್ನಡೆಯಾಗಿತ್ತು. ಆದರೆ ಶನಿವಾರ ಸ್ವಪ್ನ ಪುತ್ರಿ ಮೊಬೈಲ್ ಆನ್ ಮಾಡಿದ್ದರಿಂದ ಲೋಕೇಶನ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿರುವ ವಿಚಾರ ತಿಳಿದ ಹೈದರಾಬಾದ್ ಎನ್ಐಎ ತಂಡ ಸ್ವಪ್ನ ಸುರೇಶ್ ಮತ್ತು ಸಂದೀಪ್ನನ್ನು ಬಂಧಿಸಿ ಬಳಿಕ ಇಬ್ಬರನ್ನೂ ದೊಮ್ಮಲೂರಿನ ಎನ್ಐಎ ಕಚೇರಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದೆ.
ಇಬ್ಬರನ್ನು ಕೇರಳಕ್ಕೆ ಕರೆತಂದು ಎರ್ನಾಕುಲಂನಲ್ಲಿರುವ ಅಲುವಾ ಆಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ. ಬಳಿಕ ಕೊಚ್ಚಿಯಲ್ಲಿರುವ ಎನ್ಐಎ ಕೊರ್ಟ್ಗೆ ಹಾಜರುಪಡಿಸಲಾಗಿದೆ. ಇಬ್ಬರಿಗೂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ನಾಗಾಲ್ಯಾಂಡ್ಗೆ ಹೋಗಲು ಸಿದ್ಧತೆ:
ದಕ್ಷಿಣ ಭಾರತದಲ್ಲಿ ಇದ್ದರೆ ಕಷ್ಟ ಎಂದು ತಿಳಿದು ಇಬ್ಬರು ನಾಗಾಲ್ಯಾಂಡ್ಗೆ ತೆರಳಲು ಪ್ಲಾನ್ ಮಾಡಿದ್ದರು. ಈ ನಿಟ್ಟಿನಲ್ಲಿ ನಾಗಲ್ಯಾಂಡ್ನಲ್ಲಿರುವ ಸಂದೀಪ್ ಸ್ನೇಹಿತನ ಜೊತೆ ಮಾತುಕತೆ ನಡೆದಿತ್ತು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೋವಿಡ್ 19 ಇರುವ ಈ ಸಮಯದಲ್ಲಿ ಕರ್ನಾಟಕ ಮತ್ತು ಕೇರಳದ ಮಧ್ಯೆ ರಸ್ತೆಯಲ್ಲಿ ಸಂಚರಿಸುವುದು ಅಷ್ಟು ಸುಲಭ ಅಲ್ಲ. ಹೀಗಿದ್ದರೂ ಆರೋಪಿಗಳು ಕಾರಿನಲ್ಲಿ ಕೊಚ್ಚಿಯಿಂದ ಬೆಂಗಳೂರಿಗೆ ಸುಲಭವಾಗಿ ಬಂದಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.