ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನೂರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇಂದು ಸಹ 135 ಮಂದಿಗೆ ಸೋಂಕು ತಗುಲಿದೆ. ಹೀಗಾಗಿ ಜಿಲ್ಲೆಯ ಜನತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಶನಿವಾರ 107 ಮಂದಿಗೆ ಕೊರೊನಾ ಸೋಂಕು ದೃಢವಾಗಿತ್ತು. ಇಂದು 135 ಪ್ರಕರಣಗಳು ಪತ್ತೆಯಾಗಿವೆ. ಚಿಕ್ಕಬಳ್ಳಾಪುರ ತಾಲೂಕು 33, ಬಾಗೇಪಲ್ಲಿ 14, ಚಿಂತಾಮಣಿ 28, ಗೌರಿಬಿದನೂರು 46, ಶಿಡ್ಲಘಟ್ಟ 8, ಗುಡಿಬಂಡೆ 6 ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದ್ದು, ಪ್ರತಿ ದಿನ ಒಂದಂಕಿ, ಎರಡಂಕಿ ಬರುತ್ತಿದ್ದ ಸಂಖ್ಯೆ ಈಗ ಮೂರಂಕಿಗೆ ತಲುಪಿದೆ. ಶತಕ ದಾಟಿ ದ್ವಿಶತಕದತ್ತ ಮುನ್ನುಗ್ಗುತ್ತಿದ್ದು, ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನ 200 ದಾಟಿದರೂ ಅಚ್ಚರಿಯಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಜನ ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಗುರಿಯಾಗಿದ್ದ ಗುಡಿಬಂಡೆ ತಾಲೂಕು ಕಚೇರಿಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ಸರ್ಕಾರಿ ನೌಕರ ಸಹ ಇಂದು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.