ದಾವಣಗೆರೆ: ಓಟಿಟಿ ಸಿನಿಮಾ ರಂಗಕ್ಕೇನು ಮಾರಕವಲ್ಲ. ಓಟಿಟಿ ಆಧುನಿಕಥೆಗೆ ತಕ್ಕ ಹಾಗೆ ಕೆಲ ಬದಲಾವಣೆ ಆಗುತ್ತೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ದಾವಣಗೆರೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 5ಜಿ ಯಿಂದ ದೊಡ್ಡ ಸ್ಕ್ಯಾಮ್ ಇದೆ ಎಂಬ ದರ್ಶನ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಓಟಿಟಿ ಆಧುನಿಕಥೆಗೆ ತಕ್ಕ ಹಾಗೆ ಕೆಲ ಬದಲಾವಣೆ ಆಗುತ್ತೆ. ಆದರೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಸಿಗುವ ಖುಷಿ ಓಟಿಟಿ, ಟಿವಿಯಲ್ಲಿ ಸಿಗಲ್ಲ. ಓಟಿಟಿ ಮತ್ತು ಟಿವಿಯಲ್ಲಿ ನೋಡಿ ಸಿಳ್ಳೆ ಹೊಡೆಯೋಕೆ ಆಗಲ್ಲ ಎಂದರು.
ಚಿತ್ರರಂಗದಲ್ಲಿ ನಿರ್ದೇಶಕರು ಮನೆ-ಮಠ ಮಾರಿಕೊಂಡ ಸಿನಿಮಾ ಮಾಡಿರುತ್ತಾರೆ. ಹೀರೋಗಳು ತಮ್ಮ ಎಫರ್ಟ್ ಹಾಕಿ ಸಿನಿಮಾ ಮಾಡಿರುತ್ತಾರೆ. ಸಿನಿಮಾವನ್ನ ಸಿಳ್ಳೆ, ಚಪ್ಪಾಳೆ ಮೂಲಕ ಥಿಯೇಟರ್ ನಲ್ಲಿ ನೋಡಿದ್ರೆ ಒಂದು ರೀತಿ ಖುಷಿ ಇರುತ್ತೆ. ಅದನ್ನ ಟಿವಿಯಲ್ಲಿ ನೋಡಿದ್ರೆ ಆ ರೀತಿಯ ಖುಷಿ ಸಿಗುತ್ತಾ ಎಂದು ಪ್ರಶ್ನಿಸಿದ್ದರು.
ಜನವರಿ 10ರಂದು ಫೇಸ್ಬುಕ್ ಲೈವ್ ಬಂದಿದ್ದ ಸಾರಥಿ, ಆರಂಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದರು. ನಂತರ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎಮದು ಹೇಳಿದ್ದರು. ಇದೇ ವೇಳೆ ಓಟಿಟಿ ಪ್ಲಾಟ್ಫಾರಂನಲ್ಲಿ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಅವರು, ಥಿಯೇಟರ್ ನಲ್ಲಿ ಕೇಳುವ ಚಪ್ಪಾಳೆಗಳೇ ನಮಗೆ ಮುಖ್ಯ. ಸದ್ಯ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೂ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದರು.
ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ನೀಡದೆ ಇರುವುದರ ಹಿಂದೆ ಅಂಬಾನಿಯ 5ಜಿ ಸ್ಕ್ಯಾಮ್ ಇದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಯಾಕೆಂದರೆ ಮಾಲ್ ಗಳು, ಮಾರುಕಟ್ಟೆ, ಅಂಗಡಿ, ಕಲ್ಯಾಣ ಮಂಟಪಗಳು, ಶಾಲಾ- ಕಾಲೇಜುಗಳು ತೆರೆದಿವೆ. ಎಲ್ಲ ಕಡೆ ಜನ ಸೇರುತ್ತಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ ಮಾತ್ರ ಶೇ.100ರಷ್ಟು ಸೀಟು ಭರ್ತಿಗೆ ಅವಕಶ ನೀಡುತ್ತಿಲ್ಲ. ಅಂಬಾನಿ 5 ಜಿ ನೆಟ್ ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಅವರ 5 ಜಿ ನೆಟ್ವರ್ಕ್ ಚಾಲ್ತಿಯಲ್ಲಿರಬೇಕು ಎಂದರೆ ಎಲ್ಲರೂ ಮೊಬೈಲ್ ಗೆ ಅಡಿಕ್ಟ್ ಆಗಬೇಕು. 5 ಜಿ ಓಡಬೇಕು ಅಂದರೆ ಓಟಿಟಿಯಲ್ಲಿ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ಹಣ ಬರುವುದು. ಅದೇ ಚಿತ್ರಮಂದಿರಗಳು ತೆರೆದರೆ ಓಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸುತ್ತಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದರು.