ಬಿರುಬೇಸಗೆಯಲ್ಲಿ ವಕ್ಕರಿಸಿದ ಕೊರೋನಾ ವೈರಸ್ ಮಳೆಗಾಲದ ಮುಂಬಾಗಿಲಲ್ಲಿ ಮತ್ತಷ್ಟು ರೌದ್ರಾವತಾರ ತಾಳಿದೆ. ಇದರ ಫಲವಾಗಿ ಬಾಧಿಸುತ್ತಿರೋ ಗೃಹಬಂಧನದಿಂದಾಗಿ ಬಹುತೇಕ ಎಲ್ಲರ ದಿನಚರಿಯೂ ಖಾಲಿ ಖಾಲಿ. ಆದರೆ ಸಿನಿಮಾದಂಥಾ ಕ್ರಿಯೇಟಿವ್ ಕ್ಷೇತ್ರದ ಭಾಗವಾಗಿರೋ ಮನಸುಗಳು ಮಾತ್ರ ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿವೆ. ನಿರ್ದೇಶಕರು, ನಟ ನಟಿಯರು ಆಶಾವಾದ ಧರಿಸಿಕೊಂಡಂತೆ ಹೊಸ ಕನಸುಗಳಿಗೆ ಕಾವು ಕೊಡಲಾರಂಭಿಸಿದ್ದಾರೆ. 777 ಚಾರ್ಲಿ, ಮಾರಿಗೋಲ್ಡ್ನಂಥಾ ಬಹುನಿರೀಕ್ಷಿತ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ, ಮತ್ತೊಂದಷ್ಟು ವಿಪುಲ ಅವಕಾಶಗಳನ್ನು ತನ್ನದಾಗಿಸಿಕೊಂಡಿರುವ ಸಂಗೀತಾ ಶೃಂಗೇರಿ ಕೂಡಾ ಗೃಹಬಂಧನದ ಏಕತಾನತೆಯನ್ನು ಒಂದಷ್ಟು ಖುಷಿಗಳೊಂದಿಗೆ ಸಂಪನ್ನವಾಗಿಸುತ್ತಿದ್ದಾರೆ.
Advertisement
ಹರಹರ ಮಹಾದೇವ ಎಂಬ ಧಾರಾವಾಹಿಯಲ್ಲಿ ಸತಿಯ ಪಾತ್ರವನ್ನು ನಿರ್ವಹಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತಿ ಗಳಿಸಿಕೊಂಡಿದ್ದವರು ಸಂಗೀತಾ ಶೃಂಗೇರಿ ಇದೀಗ ಸ್ಯಾಂಡಲ್ವುಡ್ಡಿನ ಬ್ಯುಸಿ ನಾಯಕಿ. ಧಾರಾವಾಹಿಯ ಮೂಲಕವೇ ತಾನೋರ್ವ ಪ್ರತಿಭಾವಂತ ನಟಿಯೆಂಬುದನ್ನು ಸಾಭೀತು ಪಡಿಸಿದ್ದ ಸಂಗೀತಾ ಪಾಲಿಗೆ ಆ ನಂತರದಲ್ಲಿ ಹಿರಿತೆರೆಯಲ್ಲಿಯೂ ಭರ್ಜರಿ ಅವಕಾಶಗಳೇ ಅರಸಿ ಬರಲಾರಂಭಿಸಿದ್ದವು. ಅದರಲ್ಲಿಯೂ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ನಂತರವಂತೂ ಸಂಗೀತಾ ಪಾಲಿಗೆ ಅವಕಾಶಗಳ ದಿಡ್ಡಿ ಬಾಗಿಲು ತೆರೆದಂತಾಗಿದೆ.
Advertisement
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಕೊರೋನಾ ಮಾರಿ ಅಮರಿಕೊಳ್ಳದಿದ್ದರೆ ಈ ಹೊತ್ತಿಗೆಲ್ಲ ಚಾರ್ಲಿ ಚಿತ್ರ ಅಂತಿಮ ಘಟ್ಟ ತಲುಪಿಕೊಂಡಿರುತ್ತಿತ್ತು. ಆದರೆ ಸರಿಸುಮಾರು ಒಂದೂವರೆ ವರ್ಷಗಳ ಕಾಲ ಆ ಸಿನಿಮಾಗಾಗಿಯೇ ಸಮರ್ಪಿಸಿಕೊಂಡಿರೋ ಸಂಗೀತಾಗೆ ತಡವಾದದ್ದರ ಬಗ್ಗೆ ಯಾವ ಬೇಸರವೂ ಇಲ್ಲ. ಯಾಕೆಂದರೆ, ಒಂದು ಅದ್ಭುತವಾದ ಕಥಾನಕದಲ್ಲಿ ಅಷ್ಟೇ ಸೊಗಸಾದ ಪಾತ್ರವಾದ ಬಗ್ಗೆ ಅವರಿಗೊಂದು ಹೆಮ್ಮೆಯಿದೆ. ಈ ಚಿತ್ರದಿಂದಲೇ ತನ್ನ ವೃತ್ತಿ ಬದುಕಿನ ದಿಕ್ಕುದೆಸೆಗಳು ಬದಲಾಗುತ್ತದೆಯೆಂಬ ಗಾಢ ನಂಬಿಕೆಯೂ ಅವರಲ್ಲಿದೆ.
Advertisement
Advertisement
777 ಚಾರ್ಲಿ ಚಿತ್ರದ ಕಥೆಯ ವಿಶೇಷತೆಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಒಂದಷ್ಟು ಸುಳಿವುಗಳೂ ಅನಾವರಣಗೊಂಡಿವೆ. ರಕ್ಷಿತ್ ಶೆಟ್ಟಿಯಂತೂ ಅದನ್ನೊಂದು ಧ್ಯಾನವಾಗಿಸಿದ್ದಾರೆ. ತಿಂಗಳ ಹಿಂದೆ ಭರದಿಂದ ಹೊರರಾಜ್ಯಗಲ್ಲಿ ನಡೆದಿದ್ದ ಚಿತ್ರೀಕರಣದಲ್ಲಿ ಸಂಗೀತಾ ಕೂಡಾ ಹುರುಪಿನಿಂದಲೇ ಭಾಗಿಯಾಗಿದ್ದರು. ಆ ಚಿತ್ರದಲ್ಲಿ ಸಂಗೀತಾ ದೇವಕಿ ಎಂಬ ಪಾತ್ರದಲ್ಲಿ ನಟಿಸಿದ್ದಾರಂತೆ. ಅದರಲ್ಲಿ ಅವರದ್ದು ಅನಿಮಲ್ ವೆಲ್ಫೇರ್ ಆಫಿಸರ್ ಪಾತ್ರ. ಇಡೀ ಕಥೆಯ ಕೇಂದ್ರಬಿಂದುವಿನಂಥಾ ಆ ಪಾತ್ರದ ಬಗ್ಗೆ ಅವರೊಳಗೆ ಅನೇಕಾನೇಕ ಕನಸುಗಳಿವೆ. ಅದಕ್ಕೆ ಚಿತ್ರಪ್ರೇಮಿಗಳ ಕಡೆಯಿಂದ ಯಾವ ಪ್ರತಿಕ್ರಿಯೆ ಬರಬಹುದೆಂಬ ಕುತೂಹಲವೂ ಅವರಲ್ಲಿದೆ.
ಹೀಗೆ ಒಂದೂವರೆ ವರ್ಷದಿಂದ ಚಾರ್ಲಿಯ ಧ್ಯಾನದಲ್ಲಿ ಕಳೆದು ಹೋಗಿರೋ ಸಂಗೀತಾ ಶೃಂಗೇರಿ ಲಾಕ್ಡೌನ್ ಕಾಲಾವಧಿಯನ್ನೂ ಕೂಡಾ ಅದರ ಛಾಯೆಯಲ್ಲಿಯೇ ಕಳೆಯುತ್ತಾ ಬಂದಿದ್ದಾರೆ. ಇನ್ನು ಬಾಕಿ ಉಳಿದುಕೊಂಡಿರೋ ಮೂವತ್ತು ಬಾಗದಷ್ಟು ಚಿತ್ರೀಕರಣ, ಲೊಕೇಷನ್ನುಗಳ ಬಗ್ಗೆ ಆಲೋಚಿಸುತ್ತಾ ಖುಷಿಗೊಳ್ಳುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿಯೇ ಮಾರಿಗೋಲ್ಡ್ ಎಂಬುದು ಅವರ ಪಾಲಿಗೆ ಮತ್ತೊಂದು ಕನಸಿನಂತೆ ಕಾಡುತ್ತಿದೆ.
ಚಾರ್ಲಿ ಚಿತ್ರವನ್ನು ಒಂದೂವರೆ ವರ್ಷದಷ್ಟು ಹಿಂದೆ ಒಪ್ಪಿಕೊಂಡ ನಂತರದಲ್ಲಿ ಸಂಗೀತಾ ಅದನ್ನು ಬಿಟ್ಟು ಬೇರ್ಯಾವುದರ ಬಗ್ಗೆಯೂ ಆಲೋಚಿಸಿರಲಿಲ್ಲವಂತೆ. ಈ ಕಾಲಾವಧಿಯಲ್ಲಿ ಅವರ ಮುಂದೆ ಅನೇಕಾನೇಕ ಅವಕಾಶಗಳು ಅರಸಿ ಬಂದಿದ್ದವು. ಆದರೆ ಚಾರ್ಲಿ ಕಂಪ್ಲೀಟಾಗೋವರೆಗೂ ಯಾವುದನ್ನೂ ಒಪ್ಪಿಕೊಳ್ಳಬಾರದೆಂಬ ದೃಢ ಸಂಕಪ್ಲ ಮಾಡಿಕೊಂಡಿದ್ದರಂತೆ. ಹಾಗಿದ್ದರೂ ಅವರು ದೂದ್ಪೇಡ ದಿಗಂತ್ ನಾಯಕನಾಗಿ ನಟಿಸುತ್ತಿರೋ ಮಾರಿಗೋಲ್ಡ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣವಾದದ್ದು ಅದರ ಚೆಂದದ ಕಥೆ ಅನ್ನೋದು ಸಂಗೀತಾರ ಸ್ಪಷ್ಟೀಕರಣ. ಆ ಸಿನಿಮಾ ಚಿತ್ರೀಕರಣ ಕೂಡಾ ಒಂದಷ್ಟು ನಡೆದಿದೆ.
ಇನ್ನುಳಿದಂತೆ ಕಮರ್ಶಿಯಲ್ ಜಾಡಿನಾಚೆಗೂ ಪ್ರಯೋಗಾತ್ಮಕ ಕಥೆಗಳಲ್ಲಿ ಸವಾಲಿನ ಪಾತ್ರ ಮಾಡಬೇಕೆಂಬುದು ಸಂಗೀತಾರ ಬಯಕೆ. ಅದಕ್ಕೆ ತಕ್ಕುದಾಗಿಯೇ ಎಸ್ ಮಹೇಂದರ್ ನಿರ್ದೇಶನದ ಚಿತ್ರದಲ್ಲಿ ನಟಿಸೋ ಅವಕಾಶ ಕೂಡಿ ಬಂದಿತ್ತು. ಸಂಪೂರ್ಣವಾಗಿ ವಿಶೇಷ ಕಥೆ ಹೊಂದಿರೋ ಆ ಚಿತ್ರದ ಚಿತ್ರೀಕರಣ ಬಹು ಹಿಂದೆಯೇ ಮುಕ್ತಾಯವಾಗಿದೆ. ಚಾರ್ಲಿ, ಮಾರಿಗೋಲ್ಡ್ ಜೊತೆಗೆ ಆ ಚಿತ್ರವೂ ಪ್ರೇಕ್ಷಕರ ಮುಂದೆ ಬರಲಿದೆ. ಹಾಗಾದರೆ, ಇವಿಷ್ಟು ಚಿತ್ರಗಳಾಚೆಗೆ ಸಂಗೀತಾ ಶೃಂಗೇರಿಯ ಮುಂದಿನ ಸಿನಿಮಾಗಳ್ಯಾವುವೆಂಬುದರ ಬಗ್ಗೆಯೂ ಅವರೇ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಮೊದಲೇ ಹೇಳಿದಂತೆ ಯಾವಾಗ ಸಂಗೀತಾ ಚಾರ್ಲಿ ಚಿತ್ರವನ್ನು ಒಪ್ಪಿಕೊಂಡು ಚಿತ್ರೀಕರಣದಲ್ಲಿ ಭಾಗಿಯಾದರೋ ಆವಾಗಿನಿಂದಲೇ ಅವಕಾಶಗಳು ಅರಸಿ ಬರಲಾರಂಭಿಸಿದ್ದವಂತೆ. ಆದರೆ ಅದೆಷ್ಟೇ ಕಾಲವಾದರೂ ಚಾರ್ಲಿ ಕಂಪ್ಲೀಟಾದ ಮೇಲೆಯೇ ಮುಂದಿನ ಸಿನಿಮಾ ಒಪ್ಪಿಕೊಳ್ಳಬೇಕೆಂಬ ನಿರ್ಧಾರಕ್ಕವರು ಬಂದಿದ್ದರು. ಅದನ್ನು ಮಾರಿಗೋಲ್ಡ್ ಬ್ರೇಕ್ ಮಾಡಿದರೂ ಕೂಡಾ ಮತ್ತೆ ಸಂಗೀತಾ ಆ ನಿರ್ಧಾರಕ್ಕೇ ಬದ್ಧರಾಗಿದ್ದಾರೆ. ಲಾಕ್ಡೌನ್ ಮುಗಿದ ನಂತರ 777 ಚಾರ್ಲಿಯ ಮೂವತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಲಿದೆ. ಅದಾದ ನಂತರವೇ ಮುಂದಿನ ಸಿನಿಮಾ ಬಗ್ಗೆ ಗಮನಹರಿಸುವ ಸಂಕಲ್ಪ ಸಂಗೀತಾ ಅವರದ್ದು.