ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ 777 ಚಾರ್ಲಿ ಕುರಿತು ಚಿತ್ರತಂಡ ಬಿಗ್ ಅನೌನ್ಸ್ಮೆಂಟ್ ಮಾಡಿದ್ದು, ತಮಿಳಿನ ಖ್ಯಾತ ನಟರೊಬ್ಬರು ಚಿತ್ರತಂಡವನ್ನು ಸೇರಿದ್ದಾರೆ.
Advertisement
777 ಚಾರ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇದರ ಜೊತೆಗೆ ಅಪ್ಡೇಟ್ಗಳು ಸಹ ಸಿಗುತ್ತಿವೆ. ಇತ್ತೀಚೆಗೆ ರಾಜ್.ಬಿ.ಶೆಟ್ಟಿ ಹಾಗೂ ಡ್ಯಾನಿಶ್ ಸೇಟ್ ಚಿತ್ರತಂಡ ಸೇರಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಇದೀಗ ಮತ್ತೊಂದು ಬಹುದೊಡ್ಡ ಅನೌನ್ಸ್ಮೆಂಟ್ ಹೊರ ಬಿದ್ದಿದ್ದು, ತಮಿಳಿನ ಖ್ಯಾತ ನಟ ಬಾಬಿ ಸಿಂಹ 777 ಚಾರ್ಲಿ ಚಿತ್ರತಂಡವನ್ನು ಸೇರಿದ್ದಾರೆ. ಅವರ ಹುಟ್ಟುಹಬ್ಬದ ದಿನದಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಹಿರಂಗಪಡಿಸಿದೆ.
Advertisement
Advertisement
ನವೆಂಬರ್ 4ರಂದು ಚಿತ್ರತಂಡ ಈ ಕುರಿತು ಮುನ್ಸೂಚನೆ ನೀಡಿತ್ತು. ಇದೇ ನವೆಂಬರ್ 6ರಂದು ಬೆಳಗ್ಗೆ 7.30ಕ್ಕೆ ಒಂದು ದೊಡ್ಡ ಅನೌನ್ಸ್ಮೆಂಟ್ ನಮ್ಮ ಕಡೆಯಿಂದ. ನಿರೀಕ್ಷಿಸಿ ಎಂದು ಪುಷ್ಕರ್ ಫಿಲಂಸ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅದರಂತೆ ಇಂದು ಚಿತ್ರತಂಡ ವಿಷಯವನ್ನು ಬಹಿರಂಗಪಡಿಸಿದೆ. ಬಾಬಿ ಸಿಂಹ ಅವರ ಹುಟ್ಟುಹಬ್ಬದ ಅಂಗವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ.
Advertisement
ಬಾಬಿ ಸಿಂಹ ಖಡಕ್ ಲುಕ್ ನೀಡಿರುವ ಪೋಸ್ಟರ್ ಹಂಚಿಕೊಂಡಿದ್ದು, ಪಕ್ಕದಲ್ಲಿ ರಕ್ಷಿತ್ ಶೆಟ್ಟಿ ಕೂಡ ನಿಂತಿದ್ದಾರೆ. ಅಲ್ಲದೆ ಇಬ್ಬರ ಪಕ್ಕ ಕಂದು ಹಾಗೂ ಕಪ್ಪು ಬಣ್ಣದ ಎರಡು ನಾಯಿಗಳು ಸಹ ಇವೆ. ಖ್ಯಾತ ನಟ ಬಾಬಿ ಸಿಂಹ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಅವರಿಗೆ ನಮ್ಮ 777 ಚಾರ್ಲಿ ಕುಟುಂಬಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇವೆ ಎಂದು ಬರೆಯಲಾಗಿದೆ. ನಟ ರಕ್ಷಿತ್ ಶೆಟ್ಟಿ ಸಹ ಪೋಸ್ಟ್ ಮಾಡಿ ಬಾಬಿ ಸಿಂಹ ಅವರಿಗೆ ಶುಭಾಶಯ ತಿಳಿಸಿದ್ದಾರೆ. 777 ಚಾರ್ಲಿ ಸಿನಿಮಾದಲ್ಲಿ ಬಾಬಿ ಸಿಂಹ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕಿರಣ್ರಾಜ್.ಕೆ ನಿರ್ದೇಶನದಲ್ಲಿ 777 ಚಾರ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಬಾಬಿ ಸಿಂಹ ಅವರ ನಿರ್ಧಿಷ್ಟ ಪಾತ್ರ ದಕ್ಷಿಣ ಭಾರತದವರು, ಉತ್ತರದಲ್ಲಿ ನೆಲೆಸಿರುವವರದ್ದಾಗಿದೆ. ಹೀಗಾಗಿ ಈ ಬಗ್ಗೆ ಕಿರಣ್ ನನ್ನ ಬಳಿ ಕೇಳಿದಾಗ ಬಾಬಿ ಉತ್ತಮ ಆಯ್ಕೆ ಎಂದು ಹೇಳಿದೆ. ಹೀಗಾಗಿ ಅವರು ನಮ್ಮ ತಂಡ ಸೇರಿದರು. ನಿರ್ದೇಶಕ ಕಿರಣ್ ಹಾಗೂ ನಾನು 5 ವರ್ಷಗಳ ಸ್ನೇಹಿತರು. ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೇಟಿಯಾದಾಗ ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೆವು. ಚಾರ್ಲಿ ಸಿನಿಮಾ ಮೂಲಕ ಅದು ಸಾಕಾರಗೊಂಡಿದೆ ಎಂದು ಕಿರಣ್ ಅವರ ಸ್ನೇಹದ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.
ಬಾಬಿ ಇತ್ತೀಚೆಗೆ ಕೊಕೈಕನಾಲ್ ಚಿತ್ರದಲ್ಲಿ ತಮ್ಮ ಭಾಗದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಇದೀಗ ಚಾರ್ಲಿ ತಂಡ ಸೇರಿದ್ದಾರೆ. ಅವರ ಈ ಅತಿಥಿ ಪಾತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಬಾಬಿ ಚಿತ್ರ ತಂಡ ಸೇರಿರುವುದರಿಂದ ಸಿನಿಮಾವನ್ನು ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಇದೇ ವೇಳೆ ರಕ್ಷಿತ್ ಶೆಟ್ಟಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಿರ್ದೇಶಕರು ಹಾಗೂ ಚಿತ್ರದ ಕೆಲ ಸದಸ್ಯರ ತಂಡ ಪ್ರಸ್ತುತ ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿ ಲೊಕೇಶನ್ ಹುಡುಕುತ್ತಿದೆ. ನವೆಂಬರ್ 20ರಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದೇವೆ. ಸಿನಿಮಾದ ಕೊನೇಯ 20 ನಿಮಿಷಗಳ ಚಿತ್ರೀಕರಣ ಬಾಕಿ ಉಳಿದಿದೆ. ಅಂತಿಮ ದೃಶ್ಯಗಳಿಗೆ ಹಿಮ ಆವರಿಸಿರಬೇಕು. ಹೀಗಾಗಿ ಅದನ್ನು ಕೊನೆಗೆ ಚಿತ್ರೀಕರಿಸಲಾಗುತ್ತಿದೆ. 2021ರ ಮಾರ್ಚ್ ವೇಳೆಗೆ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ರಕ್ಷಿತ್ ಶೆಟ್ಟಿ ಚಿತ್ರದ ಬಿಡುಗಡೆ ಕುರಿತು ವಿವರಿಸಿದ್ದಾರೆ. ಬಾಬಿ ಅವರು ಚಾರ್ಲಿ ತಂಡ ಸೇರಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದ್ದು, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.