ಚಿಕ್ಕಮಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಎರಡೂ ಕಡೆಯಿಂದ ಹೊರಟ ನೂರಾರು ವಾಹನಗಳು ಗಂಟೆಗಟ್ಟಲೇ ಸುಮಾರು ಮೂರ್ನಾಲ್ಕು ಕಿ.ಮೀ. ಸಾಲುಗಟ್ಟಿ ನಿಂತು, ಟ್ರಾಫಿಕ್ ಜಾಮ್ ಆದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
Advertisement
ಎರಡು ಜಿಲ್ಲೆಯಿಂದ ಹೊರಟ ನೂರಾರು ವಾಹನಗಳಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿರಿದಾದ ರಸ್ತೆಯಲ್ಲಿ ಹೀಗೆ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿದ್ದರಿಂದ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾತ್ರದ ಲಾರಿ-ಬಸ್ಸುಗಳು ಸಂಚರಿಸಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಜಿಲ್ಲಾಡಳಿತದ ನಿರ್ಬಂಧದ ಮಧ್ಯೆಯೂ ಕಿರಿದಾದ ರಸ್ತೆಯಲ್ಲಿ ದೊಡ್ಡ ಲಾರಿ, ಬಸ್ಸುಗಳು ಸಂಚಾರ ನಡೆಸುತ್ತಿವೆ. ಹಾಗಾಗಿ, ಕೊಟ್ಟಿಗೆಹಾರದ ಆರಂಭದಿಂದ ಚಾರ್ಮಾಡಿ ಘಾಟ್‍ವರೆಗೂ ಸುಮಾರು ಮೂರ್ನಾಲ್ಕು ಕಿ.ಮೀ. ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು, ಪ್ರಯಾಣಿಕರು ಹೈರಾಣಾಗಿದ್ದಾರೆ.
Advertisement
Advertisement
ಕಳೆದ ಏಳೆಂಟು ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್ ರಸ್ತೆ ಸಣ್ಣದಾಗಿ ಕುಸಿದಿತ್ತು. ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಭಾರೀ ವಾಹನಗಳಿಗೆ ನಿಷೇಧ ಹೇರುವುದರ ಜೊತೆಗೆ ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಇದರ ನಡುವೆ ಕೆಲ ದೊಡ್ಡ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡಿದ್ದಾರೆ.