Connect with us

Chamarajanagar

ಚಾಮರಾಜನಗರದಲ್ಲಿ ಹೆಚ್ಚಾಯ್ತು ಚಿರತೆ ಕಾಟ- ನಾಲ್ಕು ಜಾನುವಾರು ಬಲಿ, ಮೂವರ ಮೇಲೆ ದಾಳಿ

Published

on

ಚಾಮರಾಜನಗರ: ಒಂದು ಊರಿನ ಬಳಿಕ ಮತ್ತೊಂದು ಊರಿನಲ್ಲಿ ಚಿರತೆ ದಾಳಿ ಮಾಡುತ್ತಿದ್ದು, ಈ ವರೆಗೆ ಎರಡು ಜಾನುವಾರುಗಳನ್ನು ಕೊಂದು ಹಾಕಿದೆ. ಅಲ್ಲದೆ ಮೂವರ ಮೇಲೆ ದಾಳಿ ಮಾಡಿದೆ. ಹೀಗಾಗಿ ಚಾಮರಾಜನಗರ ರೈತರು ಆತಂಕಗೊಂಡಿದ್ದಾರೆ.

ಮೂರು ದಿನಗಳ ಅಂತರದಲ್ಲಿ ನಂಜದೇವನಪುರ, ಮರಿಯಾಲ, ಉಡಿಗಾಲ, ತಮ್ಮಡಹಳ್ಳಿ ಗ್ರಾಮಗಳಲ್ಲಿ ಚಿರತೆ ದಾಳಿಗೆ ಮೂರು ಹಸು ಒಂದು ಕುದುರೆ ಬಲಿಯಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಭಯಪಡುತ್ತಿದ್ದಾರೆ. ಗುರುವಾರ ತಮ್ಮಡಹಳ್ಳಿಯಲ್ಲಿ ಕುದುರೆ ಬಲಿ ಪಡೆದಿದ್ದ ಚಿರತೆ, ಶುಕ್ರವಾರ ಮರಿಯಾಲದ ರಾಮಣ್ಣ ಅವರ ಹಸುವನ್ನು ಕೊಂದು ಹಾಕಿದೆ. ಇಂದು ಉಡಿಗಾಲದ ಶ್ರೀಕಂಠಪ್ಪ ಅವರ ಎತ್ತನ್ನು ಚಿರತೆ ಸಾಯಿಸಿದೆ.

ಕೆಲವು ದಿನಗಳ ಹಿಂದಷ್ಟೇ ವೀರನಪುರದಲ್ಲಿ ಇಬ್ಬರು ಮತ್ತು ಹಳೇಪುರದ ಓರ್ವ ವ್ಯಕ್ತಿಯ ಮೇಲೂ ಚಿರತೆ ದಾಳಿ ಮಾಡಿ ಭಯಗೊಳಿಸಿತ್ತು. ನಂಜದೇವನಪುರ, ವೀರನಪುರ, ಹಳೇಪುರ, ಉಡಿಗಾಲ, ಕಲ್ಪುರ, ಕಡುವಿನಕಟ್ಟೆ ಹುಂಡಿ, ತಮ್ಮಡಹಳ್ಳಿ ಭಾಗದಲ್ಲಿ ನಿತ್ಯ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಇಬ್ಬರು ಬೈಕಿನಲ್ಲಿ ಬಂದು ನೋಡಿಕೊಂಡು ಹೋಗುತ್ತಾರೆ, ಚಿರತೆ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ ಎಂದು ನಂಜದೇವನಪುರದ ರೈತ ಮುಖಂಡ ರಾಜಣ್ಣ ದೂರಿದ್ದಾರೆ.

ನಂಜದೇವನಪುರ ಭಾಗದಲ್ಲಿ ಕಲ್ಲು ಗಣಿಗಾರಿಕೆಗಳ ಕ್ವಾರಿಗಳು ಚಿರತೆಗಳ ಅವಾಸಸ್ಥಾನವಾಗಿ ಮಾರ್ಪಟ್ಟಿವೆ. ತೋಟದ ಮನೆಯಲ್ಲಿರುವವರು, ದನಗಾಹಿಗಳು ಜೀವ ಕೈಯಲ್ಲಿ ಹಿಡಿದು ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ.

ಈ ಸಂಬಂಧ ಚಾಮರಾಜನಗರ ವಲಯ ಅರಣ್ಯಾಧಿಕಾರಿ ಅಭಿಲಾಶ್ ಪ್ರತಿಕ್ರಿಯಿಸಿ, ಚಿರತೆ ಸೆರೆಗೆ ಈಗಾಗಲೇ ನಾಲ್ಕು ಬೋನುಗಳನ್ನು ಇಡಲಾಗಿದೆ. ಚಿರತೆಯ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು. ಚಿರತೆ ಗಾಯಗೊಂಡಿದೆಯೇ, ವಯಸ್ಸಾಗಿದೆಯೇ ಎಂಬ ಗೊಂದಲ ಮುಂದುವರೆದಿದ್ದು, ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನಿರಾಂತಕವಾಗಿದ್ದ ಮರಿಯಾಲದಲ್ಲೂ ಚಿರತೆ ಕಾಣಿಸಿಕೊಂಡು ನಿದ್ದೆಗೆಡಿಸದೆ.

Click to comment

Leave a Reply

Your email address will not be published. Required fields are marked *