ಚಾಮರಾಜನಗರ: ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರು ಮೈತ್ರಿ ಧರ್ಮ ಪಾಲನೆ ಮಾಡಿ ಮಾತುಕತೆಯಂತೆ ಆಣೆ ಪ್ರಮಾಣ ಮಾಡಿರುವ ವೀಡಿಯೋವೊಂದು ಇದೀಗ ವೈರಲ್ ಆಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
Advertisement
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ 15 ಸದಸ್ಯ ಬಲವಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ 3 ಪಕ್ಷಗಳ ತಲಾ 5 ಬೆಂಬಲಿತರು ಗೆದ್ದಿದ್ದರು. ಆದರೆ ಇಲ್ಲಿ ಅಧಿಕಾರ ಹಿಡಿಯಲು ಯಾವುದಾದರೂ 2 ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಿದ್ಧವಾಗಿ 2 ಪಕ್ಷಗಳ ಸದಸ್ಯರು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಈ ವೇಳೆ ಕೆಲ ಸದಸ್ಯರು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಮುಂಭಾಗ ಕರ್ಪೂರ ಹಚ್ಚಿ ನಾವೆಲ್ಲ ಆಡಿದ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.
Advertisement
Advertisement
ಮತ್ತೊಂದು ವೀಡಿಯೋದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹನೂರು ತಾಲೂಕು ಘಟಕದ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ ಮಾತನಾಡಿ ಮೊದಲ 10 ತಿಂಗಳ ಅವಧಿಗೆ ಬಸವರಾಜು, ಮುಂದಿನ 12 ತಿಂಗಳು ಮಮತಾರಾಣಿ ಮತ್ತು ಉಳಿದ 8 ತಿಂಗಳಿಗೆ ಶಬಾನ ಖಾನಮ್ ಅವರು ಅಧ್ಯಕ್ಷರಾಗಲಿದ್ದಾರೆ. ಏನೇ ಆದರೂ ನಾವೆಲ್ಲಾ 50:50 ಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
Advertisement
ಇದೇ ವೇಳೆ ಮತ್ತೊರ್ವ ಮುಖಂಡ ಫೈರೋಜ್ ಮಾತನಾಡಿದ್ದು 5 ವರ್ಷ ಈಗ ಹೇಗಿದ್ದೇವೆ ಹಾಗೆಯೇ ಇರಬೇಕು, ಯಾರಾದರು ಒಬ್ಬರು ಹೆಚ್ಚು ಕಡಿಮೆ ಮಾಡಿದರೆ ಅವರ ಮನೆ ಮುರಿದು ಹೋಗುತ್ತದೆ ಎಂದು ಹೇಳಿದ್ದಾರೆ. ಈ ಎರಡು ವಿಡಿಯೋಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಅಥವಾ ಚುನಾವಣಾ ಆಯೋಗ ಮಧ್ಯೆ ಪ್ರವೇಶಿಸಿ ಏನಾದರೂ ಕ್ರಮ ಕೈಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.