DharwadKarnatakaLatestMain Post

ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲ ಇದೆ: ಸಿಎಂ ಇಬ್ರಾಹಿಂ

– ಮುಸ್ಲಿಮರಲ್ಲಿ ಕೈ ಮುಗಿದು ಬೇಡ್ತೇನೆ ಗೋವು ತಿನ್ಬೇಡಿ

ಹುಬ್ಬಳ್ಳಿ: ಗೋಹತ್ಯೆ ನಿಷೇಧಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಮುಸ್ಲಿಮರಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ ಗೋವು ಯಾರೂ ತಿನ್ನಬಾರದು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಗೋಹತ್ಯೆ ನಿಷೇಧಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಆದರೆ ಬಂಜೆಯಾದ ಗೋವು ನೋಡಿಕೊಳ್ಳುವವರು ಯಾರು? ಅದಕ್ಕಾಗಿ ಪ್ರತಿ ಪಂಚಾಯತಿಗೆ ಒಂದರಂತೆ ಗೋಶಾಲೆ ತೆರೆಯಬೇಕು. ವಯಸ್ಸಾದ ಜಾನುವಾರುಗಳನ್ನು ಸಾಕಲು ಗೋಶಾಲೆ ತೆರೆಯಬೇಕು. ಸರ್ಕಾರ ಗೋಸಾಕಾಣಿಕೆಯ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲದಿದ್ದರೆ ರೈತರು, ಚರ್ಮಕಾರಿಗಳು ಏನು ಮಾಡಬೇಕು? ಎಂದು ಪ್ರಶ್ನಿಸಿದರು.

ಕೊಡವರು ಗೋಮಾಂಸ ಸೇವನೆ ಕುರಿತ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದು ನನಗೆ ಗೊತ್ತಿಲ್ಲ. ಯಾವುದೇ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ ಎಂದರು.

ಲವ್ ಜಿಹಾದ್ ಕಾನೂನು ಕುರಿತು ಮಾತನಾಡಿದ ಅವರು, ಲವ್ ಜಿಹಾದ್ ಕಾನೂನು ತಂದು ಏನು ಮಾಡಲು ಸಾದ್ಯ? ಲವ್ ಜಿಹಾದ್ ಗಂಡ ಹೆಂಡತಿ ರಾಜಿ ಆದರೆ ಏನು ಮಾಡೋದಕ್ಕೆ ಆಗುತ್ತದೆ. ಒತ್ತಾಯಪೂರ್ವಕವಾಗಿ ಮಾಡಿದರೆ ಕ್ರಮ ಕೈಗೊಳ್ಳಬಹುದು ಎಂದರು.

ಇದೇ ವೇಳೆ ಮೈತ್ರಿ ಸರ್ಕಾರ ಪತನದ ಬಗ್ಗೆ ಮಾತನಾಡಿದ ಇಬ್ರಾಹಿಂ, ಮೈತ್ರಿ ಸರ್ಕಾರ ಪತನಕ್ಕೆ ಯಾರು ಕಾರಣ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಯಾಕೆ ವಿಶ್ಲೇಷಣೆ ಮಾಡಲಿ. ಮತ್ತೆ ಪುನರ್ ವಿವಾಹಕ್ಕೆ ಸಾಧ್ಯ ಇದೆಯಾ ಅನ್ನೋದನ್ನು ನಾವು ನೋಡುತ್ತಿದ್ದೇವೆ. ನಾವೇನಿದ್ದರೂ ಸೇರಿಸುವುದಕ್ಕೆ ನೋಡುವವರು, ಮುರಿಯುವವರಲ್ಲ ಎಂದರು.

Leave a Reply

Your email address will not be published. Required fields are marked *

Back to top button