ಚಿಕ್ಕಮಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರೆ, ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವಿನಿಂದ ಪಾರಾದ ಘಟನೆ ನಗರದ ಕೆಂಪನಹಳ್ಳಿಯಲ್ಲಿ ನಡೆದಿದೆ.
ಮೃತಳನ್ನು 23 ವರ್ಷದ ರಂಜಿತಾ ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿದ್ದ ಪತಿ ಅರುಣ್ ಸಾವಿನಿಂದ ಪಾರಾಗಿದ್ದಾನೆ. ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಹೊಗರೆಹಳ್ಳಿಯ ರಂಜಿತಾಳನ್ನು ಮೂರು ವರ್ಷದ ಹಿಂದೆ ಚಿಕ್ಕಮಗಳೂರು ನಗರದ ಅರುಣ್ ವಿವಾಹವಾಗಿದ್ದ. ಮದುವೆ ಮುಂಚೆಯಿಂದಲೂ ಅರುಣ್ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.
Advertisement
Advertisement
ಅರುಣ್ ಹಾಗೂ ಇವನ ಗೆಳತಿಯ ಕಿರುಕುಳದಿಂದ ಬೇಸತ್ತು ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ರಂಜಿತಾ ಪೋಷಕರು ಆರೋಪಿಸಿದ್ದಾರೆ. ಮದುವೆಯಾಗಿ ಮೂರು ವರ್ಷವಾಗಿದ್ದರೂ ಒಂದು ದಿನ ಮಾತ್ರ ರಂಜಿತಾಳನ್ನು ತವರಿಗೆ ಕಳಿಸಿದ್ದನಂತೆ. ಅದು ಕೂಡ 24 ಗಂಟೆ ಮಾತ್ರ. ಅಷ್ಟೆ ಅಲ್ಲದೆ ಅರುಣ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಜೊತೆ ಇದ್ದ ಫೋಟೋ ಹಾಗೂ ವಿಡಿಯೋಗಳಿದ್ದ ಪೆನ್ ಡ್ರೈವ್ ರಂಜಿತಾಳಿಗೆ ಸಿಕ್ಕು ಆಕೆ ವಿಷಯವನ್ನ ಹೆತ್ತವರು ಹಾಗೂ ಅಣ್ಣಂದಿರ ಗಮನಕ್ಕೂ ತಂದಿದ್ದಳು. ಆಗ ಅರುಣ್, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ರಂಜಿತಾಳ ತಂದೆ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದನಂತೆ. ಆದರೆ, ಅವರಿಬ್ಬರ ಮಾನಸಿಕ ಕಿರುಕುಳದಿಂದಲೇ ಮಗಳು ಸಾವನ್ನಪ್ಪಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ.
Advertisement
Advertisement
ಪೋಷಕರು ಅರುಣ್ ನನ್ನ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದ ರಂಜಿತಾ ಕುಣಿಕೆಯ ಗಂಟು ಬಿಗಿ ಆದ ಮೇಲೆ ನನ್ನನ್ನು ಉಳಿಸು ಅಂತ ಅಣ್ಣನಿಗೆ ಕರೆ ಮಾಡಿದ್ದಾಳೆ. ಅಣ್ಣ ಬರುವಷ್ಟರಲ್ಲಿ ರಂಜಿತಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಳ್ಳಿಯಲ್ಲಿ ಕಟ್ಟಿಸುತ್ತಿದ್ದ ಮನೆಯಲ್ಲಿದ್ದ ಅರುಣ್, ಒಂದು ಕೇಸ್ ಬಿಯರ್ ನಲ್ಲಿ 9 ಬಾಟಲಿ ಕುಡಿದು ಮೂರನ್ನ ಹಾಗೇ ಉಳಿಸಿಕೊಂಡಿದ್ದ.
ರಂಜಿತಾ ಅಣ್ಣಂದಿರೂ ಹೋಗಿ ವಿಷಯ ತಿಳಿಸಿದಾಗ ಕೈಯಲ್ಲಿ ಸಿಗರೇಟ್ ಹಿಡಿದು ನಾನೂ ವಿಷ ಕುಡಿದಿದ್ದೇನೆ ಎಂದನಂತೆ. ಅವನನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ಸಾವಿನಿಂದ ಪಾರಾಗಿದ್ದಾನೆ. ಆದರೆ ರಂಜಿತಾ ಎರಡು ವರ್ಷದ ಮಗುವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಇದೀಗ, ರಂಜಿತಾ ಪೋಷಕರು ಅರುಣ್, ಆತನ ಪೋಷಕರು ಹಾಗೂ ಆ ಮಹಿಳೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.