CoronaLatestMain PostNational

ಖರ್ಚು ಮಾಡಿದ್ದು 1 ಲಕ್ಷ, ಕೈಗೆ ಬಂದಿದ್ದು ಬರೀ 35 ಸಾವಿರ – ಬಾಬಾ ಕಾ ಡಾಬಾ ಹೊಸ ಶಾಪ್ ಕ್ಲೋಸ್!

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಿಂದ ತೀವ್ರ ಸಂಕಷ್ಟಕ್ಕೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಹೊಸ ಶಾಪ್ ತೆರೆಯಲು ನೆಟ್ಟಿಗರು ಸಹಾಯ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಇದೀಗ ವೃದ್ಧ ಆ ಹೊಸ ಅಂಗಡಿಗೂ ಶಟರ್ ಎಳೆದಿದ್ದಾರೆ.

ಹೌದು. ಆಗ್ರಾದ 90 ವರ್ಷದ ವೃದ್ಧ ಕಾಂತ ಪ್ರಸಾದ್ ತಮ್ಮ ಬದುಕಿನ ಬಂಡಿ ಸಾಗಿಸಲು ರಸ್ತೆ ಬಂದಿ ಒಂದು ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಆದರೆ ಕೊರೊನಾ ವೈರಸ್ ಬಂದ ಬಳಿಕ ವೃದ್ಧ ತನ್ನ ಆದಾಯ ಕಳೆದುಕೊಂಡು ಕಣ್ಣೀರಾಕಿದ್ದರು. ವೃದ್ಧ ಕಣ್ಣೀರು ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ ವೃದ್ಧನ ಕಣ್ಣೀರಿಗೆ ಮನಸೋತ ನೆಟ್ಟಿಗರು ಅವರಿಗೆ ಹೊಸ ಅಂಗಡಿ ತೆರೆಯಲು ಸಹಾಯ ಮಾಡಿದ್ದರು.

ಇದೀಗ ವೃದ್ಧ ಆ ಅಂಗಡಿಯನ್ನು ಮುಚ್ಚಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 2020ರ ಡಿಸೆಂಬರ್ ತಿಂಗಳಿನಲ್ಲಿ ತೆರೆದಿರುವ ಅಂಗಡಿಯನ್ನು ಮುಚ್ಚುತ್ತಿದ್ದೇನೆ. ಯಾಕೆಂದರೆ ನಾನು ಈ ಅಂಗಡಿಗೆ ಸುಮಾರು 1 ಲಕ್ಷದಷ್ಟು ಖರ್ಚು ಮಾಡಿದ್ದೇನೆ. ಆದರೆ ನನ್ನ ಕೈಗೆ ಬಂದಿರುವುದು ಕೇವಲ 35 ಸಾವಿರ ಮಾತ್ರ. ಹೀಗಾಗಿ ನನಗೆ ತುಂಬಾ ನಷ್ಟವಾಗಿದೆ. ಸದ್ಯ ನಾನು ಈ ಹಿಂದಿನಂತೆ ರಸ್ತೆ ಬದಿಯಲ್ಲೇ ಅಂಗಡಿ ನಡೆಸಲು ನಿರ್ಧರಿಸಿದ್ದು, ಇದೇ ನನಗೆ ಖುಷಿ ನೀಡುತ್ತದೆ ಎಂದು ತಿಳಿಸಿದ್ದಾರೆ.

ನಾನು ಜೀವಂತವಾಗಿರುವಷ್ಟು ದಿನ ಈ ಡಾಬಾವನ್ನು ಮುಂದುವರಿಸುತ್ತೇನೆ. ಯಾವಾಗ ನನ್ನ ವ್ಯವಹಾರದಲ್ಲಿ ಕುಸಿತ ಕಂಡು ಬರುತ್ತದೋ ಅಂದು ಅಂಗಡಿ ಮುಚ್ಚುತ್ತೇನೆ. ಕಳೆದ ವರ್ಷ ಸಿಕ್ಕಿದ ದೇಣಿಗೆಯಲ್ಲಿ 20 ಲಕ್ಷ ರೂ. ಹಣವನ್ನು ನಾನು ನನ್ನ ಪತ್ನಿ ಉಳಿಸಿಕೊಂಡಿದ್ದೇವೆ ಎಂದು ಕಾಂತ ಪ್ರಸಾದ್ ವಿವರಿಸಿದ್ದಾರೆ.

ಕಣ್ಣೀರಾಕಿದ್ದ ಕಾಂತ ಪ್ರಸಾದ್:
ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಹೋಟೆಲ್‍ಗೆ ಊಟಕ್ಕೆ ಬರುವವರ ಸಂಖ್ಯೆ ತೀರಾ ವಿರಳವಾಗಿದ್ದರಿಂದ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದರು. ಇದನ್ನು ಕಂಡ ಸ್ಥಳೀಯರು ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ದಯವಿಟ್ಟು ಸ್ಥಳೀಯ ವ್ಯಾಪಾರಿಗಳನ್ನು ಉಳಿಸಿ ಎಂದು ಟ್ವಿಟ್ಟರ್ ಬಳಕೆದಾರ ವಸುಂಧರ ತಂಖಾ ಶರ್ಮಾ ಟ್ವೀಟ್ ಮಾಡಿದ್ದರು. ಅಲ್ಲದೆ ಈ ವೀಡಿಯೋ ನೋಡಿದ ನಂತರ ನನ್ನ ಹೃದವೇ ಒಡೆದಂತಾಯಿತು. ದೆಹಲಿಯ ಜನ ಅವಕಾಶ ಸಿಕ್ಕರೆ ದಯವಿಟ್ಟು ಅವರ ಬಾಬಾ ಕಾ ಡಾಬಾಗೆ ಹೋಗಿ ಊಟ ಮಾಡಿ ಎಂದು ಮನವಿ ಮಾಡಿದ್ದರು.

ಈ ವೀಡಿಯೋವನ್ನು ಮೊದಲು ಸ್ವಾದ್ ಅಫೀಶೀಯಲ್ ಎಂಬ ಫೇಸ್ಬುಕ್ ಖಾತೆಯಿಂದ ಹಂಚಿಕೊಳ್ಳಲಾಗಿತ್ತು. 80 ವರ್ಷದ ವೃದ್ಧ ದಂಪತಿ ಮಟರ್ ಪನೀರ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಮ್ಮ ಡಾಬಾದಲ್ಲಿ ಮಾರಾಟ ಮಾಡುತ್ತಿದ್ದರು. ವೀಡಿಯೋದಲ್ಲಿ ದಂಪತಿ ಅಳುತ್ತಿರುವುದನ್ನು ಕಾಣಬಹುದಾಗಿತ್ತು. ಆದರೆ ಅವರಿಗೆ ಗೊತ್ತಾಗದಂತೆ ವೀಡಿಯೋ ಮಾಡಲಾಗಿತ್ತು. 1988 ರಿಂದಲೂ ಈ ದಂಪತಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಅವರಿಗೆ ತಮ್ಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಅಲ್ಲದೆ ವೀಡಿಯೋ ಮಾಡುತ್ತಲೇ, ಆಹಾರ ಪದಾರ್ಥ ಚೆನ್ನಾಗಿರುತ್ತದೆ ಎಂಬುದನ್ನು ವೀಡಿಯೋದಲ್ಲಿ ತೋರಿಸಲಾಗಿತ್ತು. ಅಲ್ಲದೆ ವಿಳಾಸವನ್ನು ಕೂಡ ಹಂಚಿಕೊಂಡಿದ್ದರು.

ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಸಖತ್ ವೈರಲ್ ಆಗಿದ್ದು, ಬಾಲಿವುಡ್ ನಟ, ನಟಿಯರು ಸಹ ವಿಡಿಯೋ ಶೇರ್ ಮಾಡಿದ್ದರು. ಇವರ ಹೋಟೆಲ್‍ನಲ್ಲಿ ಊಟ ಮಾಡುವುದರಿಂದ ನೀವು ಕೇವಲ ಆ ವೃದ್ಧ ದಂಪತಿಯನ್ನು ಉಳಿಸಿದಂತೆ ಆಗುವುದಿಲ್ಲ. ಸ್ಥಳೀಯ ವ್ಯಾಪಾರವನ್ನು ಉಳಿಸಿದಂತಾಗುತ್ತದೆ ಎಂದು ಹಲವು ಬೇಡಿಕೊಂಡಿದ್ದರು.

Leave a Reply

Your email address will not be published. Required fields are marked *

Back to top button