ಮೈಸೂರು: ಉನ್ನತೀಕರಣಗೊಂಡಿರುವ ತುಳಸಿದಾಸ್ ಆಸ್ಪತ್ರೆಯ ಕಟ್ಡದಲ್ಲಿ 50 ಹಾಸಿಗೆಗಳ ಕೋವಿಡ್ ಹೆರಿಗೆ ಆಸ್ಪತ್ರೆಯನ್ನು ಭಾನುವಾರ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.
Advertisement
ಬಳಿಕ ಮಾತನಾಡಿದ ಅವರು, ನೂತನವಾಗಿ ಉದ್ಘಾಟನೆಗೊಂಡಿರುವ ಈ ಆಸ್ಪತ್ರೆ ಎಲ್ಲ ವ್ಯವಸ್ಥೆಯನ್ನು ಒಳಗೊಂಡಿದ್ದು, ಸುಸಜ್ಜಿತವಾಗಿರುವುದರ ಜೊತೆಗೆ ಬಹಳ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಶ್ಲಾಘಿಸಿದರು.
Advertisement
ಕೋವಿಡ್ ನಿಂದ ಮೃತರಾದವರ ಮಕ್ಕಳಿಗೆ ಅನಾಥ ಭಾವ ಕಾಡಬಾರದು. ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸುತ್ತೂರು ಮಠದ ಸ್ವಾಮೀಜಿಯವರು ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಈಗ ಪ್ರಧಾನ ಮಂತ್ರಿಗಳು ಇಂತಹ ಮಕ್ಕಳಿಗಾಗಿ ನಿಧಿಯನ್ನು ತೆರೆದಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
Advertisement
Advertisement
ಬೆಂಗಳೂರಿನ ನಂತರ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಹೀಗಾಗಿ ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಯನ್ನೂ ಸರ್ವೇ ನಡೆಸಲಾಗುತ್ತಿದೆ. ಈಗಾಗಲೇ ಶೇ.60 ರಿಂದ 70 ರಷ್ಟು ಮನೆ ಮನೆ ಸರ್ವೇ ಮುಗಿದಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಶೇ.70 ರಿಂದ 80ರಷ್ಟು ಮನೆ ಮನೆ ಸರ್ವೇ ಮುಗಿದಿದೆ ಎಂದು ತಿಳಿಸಿದರು.
ಸಾರ್ವಜನಿಕರು ಸಹ ಲಾಕ್‍ಡೌನ್ ಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಸಾರ್ವಜನಿಕರ ಜೀವ ಕಾಪಾಡಲು ಸರ್ಕಾರವು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ಶ್ಲಾಘನೆ
ಕೋವಿಡ್ ನಂತಹ ಸಂಕಷ್ಟದ ಕಾಲದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ದೇಶವೇ ಶ್ಲಾಘಿಸುತ್ತಿದೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಂಜನಗೂಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಹೆಗ್ಗಡನಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರ ಕುರಿತು ಮಾತನಾಡಿದ ಅವರು, ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಮನೆ ಮನೆ ಸರ್ವೇಯನ್ನು ಮಾಡುವಾಗ ಹಲವಾರು ತೊಂದರೆಗಳು ಬರಬಹುದು. ಹೀಗಾಗಿ ಅವರೊಡನೆ ಪೊಲೀಸ್ ಸಿಬ್ಬಂದಿಯನ್ನು ಕಳುಹುಸಿಕೊಡಿ ಇದರಿಂದ ಅವರಿಗೆ ಧೈರ್ಯ ಬರುತ್ತದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ವೇತನ ಬಿಡುಗಡೆಯಾಗಿದ್ದು, ವೇತನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವ ಸಲುವಾಗಿ ನಡೆಯುತ್ತಿರುವ ಮನೆ ಮನೆ ಸರ್ವೇಯು ಇದೇ ತಿಂಗಳಲ್ಲಿ ಬಹುತೇಕ ಮುಕ್ತಾಯವಾಗುತ್ತದೆ. ಸರ್ವೇಯಲ್ಲಿ ಕೋವಿಡ್ ಲಕ್ಷಣಗಳು ಯಾರಿಗಾದರೂ ಕಂಡುಬಂದರೆ ಅವರಿಗೆ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗುತ್ತದೆ. ಇದರಿಂದ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಹುಲ್ಲಹಳ್ಳಿಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಮಾತನಾಡಿದ ಅವರು, ತಾಲೂಕುಗಳಲ್ಲಿ ಹಬ್ಬಿರುವ ಕೋವಿಡ್ ಪ್ರಕರಣಗಳನ್ನು ಪತ್ತೆ ಹಚ್ಚುವುದರಿಂದ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಕಡಿಮೆಯಾಗಲಿವೆ. ಇದರಿಂದ ಹಳ್ಳಿಗಳು ಕೋವಿಡ್ ಮುಕ್ತ ಹಳ್ಳಿಗಳಾಗಬೇಕು. ಇದೇ ಕಾರಣಕ್ಕೆ ಮನೆ ಮನೆ ಸರ್ವೇಯನ್ನು ನಡೆಸಲಾಗುತ್ತಿದೆ.
ಮಹದೇವನಗರ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಹರ್ಷವರ್ಧನ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪನಾಗ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತಿಯ ಸಿಇಒ ಎ.ಎಂ.ಯೋಗೀಶ್, ಉಪವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಡಿವೈಎಸ್ಪಿ ಗೋವಿಂದ ರಾಜು, ತಹಶಿಲ್ದಾರ್ ಮೋಹನ್ ಕುಮಾರಿ, ಡಾ.ಸಿ.ಪಿ.ನಂಜರಾಜ್, ಡಾ.ಸುಧಾ ರುದ್ರಪ್ಪ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಸೇರಿದಂತೆ ಇತರರು ಹಾಜರಿದ್ದರು.