ಚಿಕ್ಕಮಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇದೆ. ಆದರೆ ಊಟ ಮಾತ್ರ ತಿನ್ನೋಕೆ ಆಗಲ್ಲ, ಈ ಊಟ ತಿಂದು ನಮಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಕೋವಿಡ್ ಆಸ್ಪತ್ರೆಯಿಂದ ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಕೊಡುವ ಊಟ ತಿಂದು ನಮಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಿನ್ನೆ ಬೆಳಗ್ಗೆ ಟೊಮೊಟೋ ಬಾತ್ ತಿಂಡಿ ಕೊಟ್ಟಿದ್ದರು ತಿನ್ನುವಂತಿರಲಿಲ್ಲ. ಮಧ್ಯಾಹ್ನ ಕೋಸು-ಬೇಳೆ ಸಾರು ಕೊಟ್ಟಿದ್ದರು. ಈಗಲೂ ಅದನ್ನೇ ಕೊಟ್ಟಿದ್ದಾರೆ. ಸಾಂಬರ್ ಯಾವುದೇ ರುಚಿ ಇಲ್ಲ. ಇಲ್ಲಿ ಊಟವನ್ನೇ ಮಾಡಲು ಆಗುತ್ತಿಲ್ಲ. ವೈದ್ಯರು, ವೈದ್ಯಕೀಯ ಸಲಕರಣೆ ಯಾವುದೇ ತೊಂದರೆ ಇಲ್ಲ. ಊಟದ್ದು ಮಾತ್ರ ತುಂಬಾ ಸಮಸ್ಯೆ ಇದೆ. ಔಷಧಿಯನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದಾರೆ. ಆಗಾಗ ಚೆಕ್ ಅಪ್ ಎಲ್ಲಾ ಮಾಡುತ್ತಾರೆ. ನರ್ಸ್ಗಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ. ಕುಡಿಯೋಕೆ ಬಿಸಿ ನೀರು ಸೇರಿದಂತೆ ನೀರಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ. ಆದರೆ, ಊಟದ ವ್ಯವಸ್ಥೆ ಮಾತ್ರ ಸರಿ ಇಲ್ಲ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.