ಕೋಲಾರ: ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಗೆ ಸುರಕ್ಷತಾ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‍ಎಚ್‍ಎಐ) ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement
ಕೋಲಾರದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಡಾ.ಸೆಲ್ವಮಣಿ ಅವರು, ವಾಹನ ಸವಾರರ ಜೀವ ಮುಖ್ಯ. ಹೆದ್ದಾರಿಯಲ್ಲಿ ವಾಹನಗಳ ವೇಗ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಿ ಮತ್ತು ರಸ್ತೆ ಉಬ್ಬು ನಿರ್ಮಿಸಿ. ಜೊತೆಗೆ ವಾಹನ ಸವಾರರಿಗೆ ಅನುಕೂಲವಾಗುವಂತೆ ಸೂಚನಾ ಫಲಕಗಳನ್ನು ಅಳವಡಿಸಿ. ಹೆದ್ದಾರಿಯಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಈ ದೂರುಗಳನ್ನು ಆಧರಿಸಿ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ. ಆ ಸ್ಥಳಗಳಲ್ಲಿ ಅಪಘಾತ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಿ. ರಸ್ತೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಿ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ನಾಡಿನತ್ತ ಹೆಜ್ಜೆ ಹಾಕುತ್ತಿರುವ ಜಿಂಕೆ, ಕೃಷ್ಣಮೃಗಗಳು – ನಾಯಿ ದಾಳಿಗೆ ಸಾವು
Advertisement
ಅಪಘಾತಗಳಿಂದ ಹೆಚ್ಚು ಸಾವು ನೋವು ಸಂಭವಿಸುತ್ತಿವೆ. ಹಳ್ಳಿಯ ಜನರು ಜಾನುವಾರು ಹಿಡಿದುಕೊಂಡು ಹೆದ್ದಾರಿ ಮೂಲಕ ತಮ್ಮ ಜಮೀನುಗಳಿಗೆ ಹೋಗುತ್ತಾರೆ. ಅಂತಹ ಕಡೆ ಕೆಳ ಸೇತುವೆ (ಅಂಡರ್ ಪಾಸ್) ನಿರ್ಮಾಣ ಮಾಡಿ. ಹೆದ್ದಾರಿಯಿಂದ ಹಳ್ಳಿಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಸಿಗ್ನಲ್ ಅಳವಡಿಸಿ. ಜಿಲ್ಲಾ ಕೇಂದ್ರದ ಹೊರವಲಯದ ಕೊಂಡರಾಜನಹಳ್ಳಿ ಬೈಪಾಸ್ ರಸ್ತೆಯಲ್ಲಿ ಹಾಗೂ ನಗರದ ಹಲವೆಡೆ ವ್ಯಾಪಾರಿಗಳು ಸರ್ವಿಸ್ ರಸ್ತೆ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ಇಟ್ಟಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಮತ್ತು ಜನರ ಓಡಾಟಕ್ಕೆ ಸಮಸ್ಯೆಯಾಗಿ ಅಪಘಾತ ಸಂಭವಿಸುತ್ತಿವೆ. ಶೀಘ್ರವೇ ಆ ಅಂಗಡಿಗಳನ್ನು ತೆರವು ಮಾಡಿ ಎಂದು ಆದೇಶಿಸಿದರು.
Advertisement
Advertisement
ಕಾಮಗಾರಿ ಪೂರ್ಣಗೊಳಿಸಿ:
ಜಿಲ್ಲಾಡಳಿತ ಭವನದ ಮುಂದೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಮೇಲ್ಸೇತುವೆ ಹಾಗೂ ಹೆದ್ದಾರಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಅಗತ್ಯವಿರುವ ಕಡೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು. ಜಿಲ್ಲೆಯಾದ್ಯಂತ ಅತಿ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ. ಆ ಸ್ಥಳಗಳಲ್ಲಿ ನಿಧಾನವಾಗಿ ಚಲಿಸುವಂತೆ ವಾಹನ ಸವಾರರಿಗೆ ಮಾಹಿತಿ ನೀಡಲು ಸೂಚನಾ ಫಲಕ ಹಾಕಬೇಕು. ಮಡೇರಹಳ್ಳಿಯು ಹೆಚ್ಚು ಅಪಘಾತ ಸಂಭವಿಸುವ ಸ್ಥಳವಾಗಿದ್ದು, ಅಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಿಸಿ. ಅರಾಭಿಕೊತ್ತನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‍ಪಾಸ್‍ನಲ್ಲಿ ಮಳೆ ನೀರು ನಿಲ್ಲುತ್ತಿರುವ ಬಗ್ಗೆ ದೂರು ಬಂದಿದೆ. ವಿದ್ಯುತ್ ದೀಪ ಅಳವಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮಳೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಅಪಘಾತ ಪ್ರಕರಣಗಳ ಗಾಯಾಳುಗಳ ಚಿಕಿತ್ಸೆಗೆ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ವಾಹನ ಜಪ್ತಿ ಮಾಡಿ:
ಸರಕು ಸಾಗಣೆ ವಾಹನಗಳಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಸರಕು ಸಾಗಣೆ ವಾಹನಗಳ ಚಾಲಕರು ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಪ್ರಯಾಣಿಕರನ್ನು ಕರೆದೊಯ್ಯುವ ಸರಕು ಸಾಗಣೆ ವಾಹನಗಳನ್ನು ಜಪ್ತಿ ಮಾಡಿ ಎಂದು ಪೊಲೀಸರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್,ಆರ್‍ಟಿಒ ಸಿಬ್ಬಂದಿ ಹಾಜರಿದ್ದರು.