– ಈ ವರ್ಷ ಜುಲೈನಲ್ಲೇ ಕೆರೆ ಭರ್ತಿ
– ಶತಮಾನಗಳಿಂದ ರೈತರ ನಂಬಿಕೆಯನ್ನ ಹುಸಿಗೊಳಿಸದ ಕೆರೆ
ಚಿಕ್ಕಮಗಳೂರು: ಪ್ರತಿ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಕೋಡಿ ಬೀಳುತ್ತಿದ್ದ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಈ ವರ್ಷ ಜುಲೈ ನಾಲ್ಕನೇ ವಾರದಲ್ಲೇ ಕೋಡಿ ಬಿದ್ದಿರೋದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಸುಮಾರು 2,036 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ನೋಡಲು ಸಮುದ್ರದಂತೆ ಕಾಣುತ್ತದೆ. ನೋಡುಗರ ಕಣ್ಣಿನ ದೃಷ್ಟಿ ಮುಗಿದರೂ ಈ ಕೆರೆ ವಿಸ್ತೀರ್ಣ ಮುಗಿಯುವುದಿಲ್ಲ. ಈ ದೊಡ್ಡ ಕೆರೆ ಚಿಕ್ಕಮಗಳೂರು ತಾಲೂಕಿನ ಗಿರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಜುಲೈ ಅಂತ್ಯದಲ್ಲಿ ಕೋಡಿ ಬಿದ್ದಿದೆ. ಈ ಕೆರೆ ತುಂಬುವುದರಿಂದ ಸುತ್ತಮುತ್ತಲಿನ 25ಕ್ಕೂ ಹೆಚ್ಚು ಕೆರೆಗಳಿಗೆ ಜೀವ ಬಂದಂತೆ. ಅಷ್ಟೇ ಅಲ್ಲದೆ, ಕಡೂರು, ಬೀರೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವೂ ಇದೇ ಕೆರೆ ಆಗಿದೆ. ಹಾಗಾಗಿ, ಕೆರೆ ಕೋಡಿ ಬಿದ್ದಿರುವುದು ರೈತರು, ಜನ-ಜಾನುವಾರುಗಳಿಗೆ ನೀರಿನ ಬವಣೆ ತಪ್ಪಿದಂತಾಗಿದೆ.
Advertisement
Advertisement
ನಮ್ಮ ಪೂರ್ವಿಕರು ಅದ್ಯಾವ ಶುಭ ಘಳಿಗೆಯಲ್ಲಿ ‘ಮಾಯದಂತಹಾ ಮಳೆ ಬಂತಣ್ಣ, ಮದಗಾದ ಕೆರೆಗೆ’ ಎಂಬ ಪದ ಕಟ್ಟಿದರೋ ಗೊತ್ತಿಲ್ಲ. ಅಂದಿನಿಂದಲೂ ಈ ಕೆರೆ ಹಿರಿಯ ಪದಕ್ಕೆ ಪೂರಕವಾಗಿದೆ. ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಹೀಗಿದ್ದರೂ ತಾಲೂಕಿನಲ್ಲಿ ಇರುವ ಈ ಕೆರೆ ಶತಮಾನಗಳಿಂದ ಎಂತಹಾ ಬರಗಾಲ ಬಂದರೂ ಕೋಡಿ ಬೀಳದೇ ಇರುವುದಿಲ್ಲ. ರೈತರ ನಂಬಿಕೆಯನ್ನ ಹುಸಿಗೊಳಿಸಿಲ್ಲ. ಈ ಕೆರೆಗೆ ಅನಾದಿ ಕಾಲದಿಂದಲೂ ಬಂದಿರುವುದು ಮಯಾದಂತಹ ಮಳೆಯೇ. ಈ ಕೆರೆ ಸಾವಿರಾರು ಎಕರೆಗೆ ನೀರುಣಿಸುತ್ತೆ. ಲಕ್ಷಾಂತರ ಜನ-ಜಾನುವಾರುಗಳಿಗೆ ಬಾಯಾರಿಕೆಯ ದಾಹ ನೀಗಿಸುತ್ತಿದೆ. ಸಮುದ್ರದಂತಹಾ ಈ ಕೆರೆ ಕೋಡಿ ಬಿದ್ದಿರುವ ಸುಂದರ ಕ್ಷಣಗಳನ್ನ ಕಣ್ತುಂಬಿಕೊಂಡು ಸ್ಥಳಿಯರು ಹಾಗೂ ಸುತ್ತಮುತ್ತಲಿನ ಜನ ಸಂಭ್ರಮಿಸುತ್ತಿದ್ದಾರೆ. ಕೆರೆಯ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ನಿರಂತರ ಮಳೆ- ವಿಜಯಪುರದಲ್ಲಿ ಪ್ರವಾಹದ ಆತಂಕ
Advertisement
Advertisement
ಶುಕ್ರವಾರ, ಮಂಗಳವಾರವೇ ಕೋಡಿ ಬೀಳುತ್ತೆ:
ಅದೆಂತದ್ದೇ ಮಳೆಗಾಲ ಇರಲಿ. ಅದೆಂತದ್ದೇ ಬರಗಾಲವಿರಲಿ. ಈ ಕೆರೆ ಕೋಡಿ ಬೀಳದೆ ಇರದು. ಅದರಲ್ಲೂ ಪ್ರಮುಖವಾಗಿ ಈ ಕೆರೆ ಕೋಡಿ ಬೀಳುವುದು ಕೇವಲ ಶುಕ್ರವಾರ ಅಥವಾ ಮಂಗಳವಾರ ಮಾತ್ರ. 24 ಗಂಟೆಯೂ ಮಳೆ ಸುರಿದರೂ ಬೇರೆ ದಿನ ಕೋಡಿ ಬೀಳಲ್ಲ ಅಂತಾರೆ ಸ್ಥಳೀಯರು. ಕೋಡಿ ಬಿದ್ದ ಸಂದರ್ಭದಲ್ಲಿ ಜನ-ಜಾನುವಾರು ಹಾಗೂ ಬೆಳೆಗಳಿಗೆ ಈ ಕೆರೆ ನೀರನ್ನೇ ನೆಚ್ಚಿಕೊಂಡಿರೋ ಸುತ್ತಮುತ್ತಲಿನ ಜನ ಕೆರೆ ಹಾಗೂ ಕೆರೆ ಪಕ್ಕದಲ್ಲಿರುವ ಚೌಡಮ್ಮ ಹಾಗೂ ತೂಬಿಗೆ ಪೂಜೆ ಸಲ್ಲಿಸುತ್ತಾರೆ.
ಪ್ರಕೃತಿ ಸೌಂದರ್ಯವೇ ಸೆಲ್ಫಿ ಸ್ಪಾಟ್:
ಈ ಮಾಯದ ಕೆರೆಯ ಸುತ್ತ ಪ್ರಕೃತಿ ಸೌಂದರ್ಯವೇ ಮನೆ ಮಾಡಿದೆ. ಮುಗಿಲ್ಲೆತ್ತರದ ಬೆಟ್ಟಗುಡ್ಡಗಳು. ಕಣ್ಣಾಯಿಸಿದಲ್ಲೆಲ್ಲಾ ಹಚ್ಚ ಹಸಿರಿನ ವನರಾಶಿ. ತಣ್ಣಗೆ ಬೀಸೋ ಸ್ವಚ್ಛ ಗಾಳಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಯಾವುದೇ ನದಿ-ಹಳ್ಳ-ಕೊಳ್ಳಗಳ ಸಂಪರ್ಕವೇ ಇಲ್ಲದ ಈ ಕೆರೆ ಕೋಡಿ ಬೀಳೋದು ನಿಜಕ್ಕೂ ವಿಸ್ಮಯ ಅನ್ನೋದು ಸ್ಥಳಿಯರ ಭಾವನೆ. ಹಾಗಾಗಿ, ಸುತ್ತಲೂ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಇರುವ ಈ ಕೆರೆ ಬಳಿ ಬರುವ ಪ್ರವಾಸಿಗರು ನಾನಾ ಭಂಗಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.