Connect with us

Chitradurga

ಕೋಟೆನಾಡಿಗೆ ಕಳ್ಳದಾರಿಯೇ ಕಂಟಕ – ಜಿಲ್ಲೆಯಲ್ಲಿ ನಿಂತಿಲ್ಲ ಅಕ್ರಮ ವಲಸಿಗರ ಪ್ರವೇಶ

Published

on

ಚಿತ್ರದುರ್ಗ: ಗ್ರೀನ್ ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಆರಂಭದಿಂದಲೂ ಹೊರ ರಾಜ್ಯಗಳಿಂದ ಅಕ್ರಮವಾಗಿ ಕಳ್ಳದಾರಿಯಲ್ಲಿ ಬರುವವರಿಂದಲೇ ಕಂಟಕ ಶುರುವಾಗಿತ್ತು. ಆದರೆ ಇತ್ತೀಚೆಗೆ ಚಿತ್ರದುರ್ಗದಲ್ಲಿ ಕೊರೊನಾ ಹತೋಟಿಗೆ ಬಂದಿದ್ದು, ಸೋಂಕಿತರೆಲ್ಲಾ ಗುಣಮುಖರಾಗುತ್ತಿದ್ದರು. ಆದರೆ ಮತ್ತೆ ಕೋಟೆನಾಡಿಗೆ ಕಳ್ಳದಾರಿಯ ಮೂಲಕ ವಲಸಿಗರು ಪ್ರವೇಶ ಮಾಡುತ್ತಿದ್ದಾರೆ.

ಕೊರೊನಾ ಪ್ರಾರಂಭವಾದಗಿನಿಂದಲೂ ಗ್ರೀನ್‍ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಅನುಮತಿ ಇಲ್ಲದೇ ಗುಜರಾತ್‍ನಿಂದ ಬಂದಿದ್ದ 15 ತಬ್ಲಿಘಿಗಳಿಂದ ಕಂಠಕ ಆರಂಭವಾಗಿತ್ತು. ನಂತರ ತಮಿಳುನಾಡಿನಿಂದ ಬಂದಿದ್ದ ಕೋಡಿಹಳ್ಳಿಯ ತಂದೆ, ಮಗಳಿಂದ ಆತಂಕ ಎದುರಾಗಿತ್ತು. ಆದರೆ ಅವರೆಲ್ಲಾ ಅದೃಷ್ಟವಶಾತ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.

ಸರ್ಕಾರವೇ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧಾಜ್ಞೆ ಹೇರಿದೆ. ಆದರೂ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್, ಪುಟ್ಲಾರಹಳ್ಳಿ ಹಾಗೂ ಜಾಜೂರಿನ ಬಳಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗುಜರಾತ್‍ನಿಂದ ಅನುಮತಿ ಇಲ್ಲದೇ ಕಳ್ಳದಾರಿಯಲ್ಲಿ ಬರುವವರ ಅಕ್ರಮ ಪ್ರವೇಶ ಮಾತ್ರ ಇನ್ನೂ ನಿಂತಿಲ್ಲ.

ಹೀಗಾಗಿ ಮತ್ತೆ ತಮಿಳುನಾಡಿನಿಂದ ಬಂದಿರುವ ಉತ್ತರ ಪ್ರದೇಶದ 27 ಜನ ವಲಸೆ ಕಾರ್ಮಿಕರು ಸೇರಿದಂತೆ ದೆಹಲಿಯಿಂದ ಬಂದಿರುವ ಓರ್ವ ಯುವಕನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರೋದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಅಕ್ರಮ ಪ್ರವೇಶವನ್ನು ತಡೆಯಲು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗಡಿಭಾಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಜಮೀನುಗಳ ಮೂಲಕ ಹಾಗೂ ಕಳ್ಳದಾರಿಗಳಲ್ಲಿ ಕಾರ್ಮಿಕರು ಗ್ರಾಮಕ್ಕೆ ಬರುತ್ತಿದ್ದಾರೆ.

ಹೊರರಾಜ್ಯಗಳಾದ ತಮಿಳುನಾಡು, ಉತ್ತರಪ್ರದೇಶ, ಗುಜರಾತ್ ಹಾಗೂ ದೆಹಲಿಯಿಂದ ಆಗಮಿಸಿರುವವರಲ್ಲಿ ಮಾತ್ರ ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರನ್ನು ಜನನಿಬಿಡ ಪ್ರದೇಶಗಳೆನ್ನದೇ ಸಿಕ್ಕ ಸಿಕ್ಕ ಹಾಸ್ಟಲ್‍ಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಬಳಿಕ ಅವರಲ್ಲಿ ಯಾರಿಗಾದರೂ ಪಾಸಿಟಿವ್ ಪತ್ತೆಯಾದರೆ ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡದೇ ಜಿಲ್ಲಾಡಳಿತ ನಿರ್ಲಕ್ಷ ತೋರುತ್ತಿದೆ. ಜನರು ಅಗತ್ಯ ವಸ್ತುಗಳು ಹಾಗೂ ರೈತರು ಉಳುಮೆ ಮಾಡಲು ಬೇಕಿರುವ ಬೀಜ, ಗೊಬ್ಬರ ಖರೀದಿಸಲು ಸಹ ಹೊರಬರಲು ಯೋಚಿಸುವಂತಾಗಿದೆ ಎಂದು ಸ್ಥಳೀಯ ಮೂಡಲಗಿರಿ ಹೇಳಿದ್ದಾರೆ.

ಮೇ 14 ರಿಂದ ಇಲ್ಲಿಯವರೆಗೆ ಹೊರರಾಜ್ಯಗಳಿಂದ ಅಕ್ರಮವಾಗಿ ಬಂದು ಚೆಕ್‍ಪೋಸ್ಟ್ ಗಳಲ್ಲಿ ಸಿಕ್ಕಂತಹ 39 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರಲ್ಲಿ 9 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧ ಹೇರಿದ್ದರೂ ಸಹ ಅಕ್ರಮ ಪ್ರವೇಶದಿಂದ ಜನರು ಗ್ರಾಮಗಳಿಗೆ ಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ ಮತ್ತೆ ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ರಣಕೇಕೆಯಾಕಲಿದೆ ಎಂಬ ಭೀತಿ ಶುರುವಾಗಿದೆ.

Click to comment

Leave a Reply

Your email address will not be published. Required fields are marked *