– 2019 ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್
ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟು 16 ತಿಂಗಳ ನಂತರ, ಡಿಎನ್‍ಎ ಮಾದರಿಯ ಮೂಲಕ ಆ ವ್ಯಕ್ತಿಯ ಕುಟುಂಬವನ್ನು ರೈಲ್ವೆ ಪೊಲೀಸರು ಪತ್ತೆ ಮಾಡಿದ್ದಾರೆ.
2019ರಲ್ಲಿ ಬೋಯಿಸಾರ್ ರೈಲ್ವೆ ನಿಲ್ದಾಣದ ಹಳಿಯ ಮೇಲೆ 32 ವರ್ಷದ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವ್ಯಕ್ತಿಯ ಶವ ಗುರುತು ಸಿಗಲಾದರದಂತಹ ಪರಿಸ್ಥಿತಿಯಲ್ಲಿ ಸಿಕ್ಕಿತ್ತು. ಹೀಗಾಗಿ ಮೃತ ವ್ಯಕ್ತಿಯ ಮೂಳೆಗಳನ್ನು ಡಿಎನ್‍ಎ ಪರೀಕ್ಷೆಗಾಗಿ ಮುಂಬೈನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು. ಡಿಎನ್‍ಎ ವರದಿ ಬಂದ ನಂತರ ತನಿಖೆ ಮಾಡಿದಾಗ ವ್ಯಕ್ತಿಯ ಕುಟುಂಬ ಪತ್ತೆಯಾಗಿದೆ.
ರೈಲ್ವೆ ಹಳಿ ಆಸು-ಪಾಸಿನ ಹಳ್ಳಿಗಳಿಗೆ ಭೇಟಿ ನೀಡಿ, ಮನೆಯಲ್ಲಿ ಯಾರಾದರೂ ನಾಪತ್ತೆಯಾಗಿದ್ದಾರಾ ಎಂದು ವಿಚಾರಿಸಲಾಗಿತ್ತು. ಈ ವೇಳೆ ಕಾರ್ಮಿಕರೊಬ್ಬರು ನನ್ನ ಮಗ ಕಾಣೆಯಾಗಿದ್ದಾನೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾಹಿತಿ ಪಡೆದ ಪೊಲೀಸರು ಆ ವ್ಯಕ್ತಿಯ ರಕ್ತದ ಮಾದರಿ ಮತ್ತು ಡಿಎನ್‍ಎ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು. ಆಗ ಮೃತ ವ್ಯಕ್ತಿಯ ಕುಟುಂಬ ಪತ್ತೆಯಾಗಿದೆ.
ಮೃತವ್ಯಕ್ತಿ ಮತ್ತು ಕಾರ್ಮಿಕನ ರಕ್ತದ ಮಾದರಿಗಳು ಒಂದಕ್ಕೊಂದು ಹೋಲಿಕೆಯಾಗುತ್ತಿದ್ದವು. ಹೀಗಾಗಿ ಮೃತವ್ಯಕ್ತಿ ಆತನ ಕುಟುಂಬದವರೆಂದು ತಿಳಿದು ಬಂದಿದೆ. ಈ ಮೂಲಕ 16 ತಿಂಗಳ ನಂತರ ಈ ಪ್ರಕರಣಕ್ಕೆ ಒಂದು ಅಂತ್ಯ ಸಿಕ್ಕಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ತಿಳಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.