Connect with us

Bengaluru City

ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ

Published

on

– ದಾಖಲೆ ಸಮೇತ ಸಿದ್ದರಾಮಯ್ಯ ಆರೋಪ
– ದುಬಾರಿ ಬೆಲೆಗೆ ವಸ್ತುಗಳ ಖರೀದಿ
– ಕೊರೊನಾ ಜೊತೆ ರಾಜ್ಯಕ್ಕೆ ಸರ್ಕಾರ ಭ್ರಷ್ಟಾಚಾರ ಹಂಚಿದೆ
– ಹೆಣದ ಮೇಲೆ ಹಣ ಮಾಡಲು ಹೊರಟಿದೆ- ಡಿಕೆಶಿ

ಬೆಂಗಳೂರು: ಕೊರೊನಾ ಹೆಸರಿನಲ್ಲಿ ಸರ್ಕಾರ 2 ಸಾವಿರ ಕೋಟಿ ರೂ. ಹಗರಣ ಮಾಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.

ಸಿದ್ದರಾಮಯ್ಯ ಮಾತನಾಡಿ, ಸರ್ಕಾರ 324 ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಿದೆ. ಒಬ್ಬ ಸಚಿವ 33 ಕೋಟಿ ಮಾತ್ರ ಖರ್ಚು ಮಾಡಿದ್ದೇವೆ. ಸುಮ್ಮನೆ 33 ಪ್ರಶ್ನೆ ಕೇಳ್ತಾರೆ ಅಂತಾರೆ. ನನಗಿರುವ ಮಾಹಿತಿ ಆರೋಗ್ಯ ಇಲಾಖೆ 700 ಕೋಟಿ ಖರ್ಚು ಮಾಡಿದೆ. ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿ ಖರ್ಚು ಮಾಡಿದೆ. ಕಾರ್ಮಿಕ ಇಲಾಖೆ 1,000 ಕೋಟಿ ಖರ್ಚು ಮಾಡಿದೆ ಎಂದು ಹೇಳಿದರು.

ನಾವು 324 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣ ಖರೀದಿ ಮಾಡಿದ್ದೇವೆ. 2 ಸಾವಿರ ಕೋಟಿ ಹಗರಣದ ಆರೋಪ ಮಾಡಿದ್ದರೆ ಅದು ಸತ್ಯಕ್ಕೆ ದೂರ ಎನ್ನುತ್ತಿದ್ದಾರೆ. ಸಾಬೀತಾದರೆ ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ. ಯಡಿಯೂರಪ್ಪ ನವರು ತಮ್ಮ ಭಾಷಣದಲ್ಲಿ ಸಹಾ ಯಾವುದೇ ಅವ್ಯವಹಾರ ಆಗಿಲ್ಲ. 24 ಗಂಟೆಯಲ್ಲಿ ಯಾವ ದಾಖಲೆ ಬೇಕಾದರೂ ಕೊಡುತ್ತೇವೆ ಎಂದಿದ್ದಾರೆ. ಆದರೆ ಯಡಿಯೂರಪ್ಪ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದಾರೆ. ನಾನು ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ಮತ್ತು ಬೇರೆ ಬೇರೆ ಇಲಾಖೆಗಳಿಗೆ ಒಟ್ಟು 20 ಪತ್ರ ಬರೆದಿದ್ದೇನೆ . ಆರೋಗ್ಯ ಇಲಾಖೆಯ ಕಾರ್ಯದರ್ಶಿ ಯ ಅರೆಬರೆ ಉತ್ತರ ಬಿಟ್ಟರೆ ಬೇರೆ ಯಾರಿಂದಲು ನನಗೆ ಉತ್ತರ ಬಂದಿಲ್ಲ ಎಂದು ತಿಳಿಸಿದರು.

ಡಿಕೆ ಶಿವಕುಮಾರ್‌ ಮಾತನಾಡಿ, ನಾವು ಪಕ್ಷದ ಹಿತವನ್ನ ಮರೆತು ಸಹಕಾರ ಕೊಟ್ಟಿದ್ದೇವೆ. ಆದರೆ ನೀವು ಕೊರೊನಾ ಹೆಣದ ಮೇಲೆ ಹಣ ಮಾಡೋಕೆ ಹೊರಟಿದ್ದೀರಾ ಅದನ್ನ ನೋಡಿಕೊಂಡು ಸುಮ್ಮನಿರಬೇಕೇ? ಬೆಂಗಳೂರು 8+1 -9 ಜನ ಮಂತ್ರಿಗಳು ಅಷ್ಟ ದಿಕ್ಪಾಲಕರು ಆದರೆ ಒಬ್ಬರಾದರು ಒಂದು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರಾ? ಬಿಜೆಪಿ ಸರ್ಕಾರ ಎಲ್ಲರಿಗೆ ಕೋವಿಡ್ ಸೋಂಕು ಜೊತೆಗೆ ಭ್ರಷ್ಟಾಚಾರದ ಸೋಂಕನ್ನು ಹಂಚಿಕೆ ಮಾಡಿದೆ ಎಂದು  ವಾಗ್ದಾಳಿ ನಡೆಸಿದರು.

110 ದಿನಗಳ ನಂತರ ಆಸ್ಪತ್ರೆಯವರನ್ನ ಕರೆದು ಮಾತನಾಡಿದ್ದಾರೆ. ಈಗ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇವರದೇನಿದ್ದರೂ ಬೆಳಿಗ್ಗೆಯಿಂದ ಸಂಜೆವರೆಗೆ ದುಡ್ಡು ಹೊಡಿಯೋದು. ಆಶಾ ಕಾರ್ಯಕರ್ತರು 14 ದಿನದಿಂದ ಪ್ರತಿಭಟನೆ ನಡೆಸುತ್ರಿದ್ದಾರೆ ಕರೆದು ಮಾತನಾಡಿದ್ದಾರಾ? ಆಟೋದವರಿಗೆ ನೇಕಾರರಿಗೆ ಚಾಲಕರಿಗೆ ಕೊಡ್ತಿನಿ ಆಂದ ದುಡ್ಡು ಕೊಟ್ಟಿದ್ದಾರಾ? ಯಾವಾಗ ಅವರು ಸತ್ತಮೇಲೆ ಕೊಡುತ್ತೀರಾ ಎಂದು ಮುಖ್ಯಮಂತ್ರಿಗಳನ್ನು ಡಿಕೆಶಿ ಪ್ರಶ್ನಿಸಿದರು.

2 ಸಾವಿರ ಕೋಟಿ ಲೂಟಿ ಹೇಗೆ?
ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ದಾಖಲೆಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಆ ಎಲ್ಲ ಲೆಕ್ಕಾಚಾರದ ವಿವರಗಳನ್ನು ಇಲ್ಲಿ ನೀಡಲಾಗಿದೆ. ಸರ್ಕಾರ ಇಲ್ಲಿಯವರೆಗೆ 324 ಕೋಟಿ ಖರ್ಚು ಮಾಡಿದೆ ಎಂದು ಹೇಳಿದ್ದರೆ ಸಿದ್ದರಾಮಯ್ಯನವರು 4,167 ಕೋಟಿ ರೂ. ಖರ್ಚಾಗಿದೆ ಎಂದು ಆರೋಪಿಸಿದ್ದಾರೆ.

ಯಾವ ಇಲಾಖೆಯದ್ದು ಎಷ್ಟು?
ಆರೋಗ್ಯ ಇಲಾಖೆ – 700 ಕೋಟಿ ರೂ.
ವೈದ್ಯಕೀಯ ಶಿಕ್ಷಣ ಇಲಾಖೆ – 815 ಕೋಟಿ ರೂ.
ಕಾರ್ಮಿಕ ಇಲಾಖೆ – 1000 ಕೋಟಿ ರೂ.
ಬಿಬಿಎಂಪಿ – 200 ಕೋಟಿ ರೂ.
ಶಿಕ್ಷಣ ಇಲಾಖೆ – 815 ಕೋಟಿ ರೂ.
ಜಿಲ್ಲಾಡಳಿತಗಳ – 740 ಕೋಟಿ ರೂ.
ಸಮಾಜ ಕಲ್ಯಾಣ, ಮಹಿಳಾ ಕಲ್ಯಾಣ, ಗೃಹ ಇಲಾಖೆ – 500 ಕೋಟಿ ರೂ.
ಞಸಿಗೆ, ದಿಂಬು ಖರೀದಿ – 150 ಕೋಟಿ ರೂ.

ವೆಂಟಿಲೇಟರ್ ಗೋಲ್‍ಮಾಲ್!
ಪ್ರತಿ ವೆಂಟಿಲೇಟರ್‌ಗೆ ಕೇಂದ್ರ ಸರ್ಕಾರ ಕೊಟ್ಟಿದ್ದು – 1 ಲಕ್ಷ ರೂ.
ಪ್ರತಿ ವೆಂಟಿಲೇಟರ್‌ಗೆ ತಮಿಳುನಾಡು ಕೊಟ್ಟಿದ್ದು 4.78 ಲಕ್ಷ ರೂ.
ಬಿಎಸ್‍ವೈ ಸರ್ಕಾರ ಮೊದಲ ಬಾರಿ ಪ್ರತಿ ವೆಂಟಿಲೇಟರ್ ಖರೀದಿ – 5.60 ಲಕ್ಷ ರೂ.
ಬಿಎಸ್‍ವೈ ಸರ್ಕಾರ 2ನೇ ಬಾರಿ ಪ್ರತಿ ವೆಂಟಿಲೇಟರ್ ಖರೀದಿ – 12.30 ಲಕ್ಷ ರೂ.
ಬಿಎಸ್‍ವೈ ಸರ್ಕಾರ 3ನೇ ಬಾರಿ ಪ್ರತಿ ವೆಂಟಿಲೇಟರ್ ಖರೀದಿ – 18 ಲಕ್ಷ ರೂ.

ಪಿಪಿಇ ಕಿಟ್‌ :
ಒಟ್ಟು 9.65 ಲಕ್ಷ ರೂ ಮೌಲ್ಯದ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಒಂದು ಪಿಪಿಇ ಕಿಟ್‌ ಬೆಲೆ 330 ರೂ. ಇದ್ದರೆ ಸರ್ಕಾರ 2,012 ರೂ. ನೀಡಿ ಖರೀದಿಸಿದೆ.

ಮಾಸ್ಕ್ :
ಒಟ್ಟು 10 ಲಕ್ಷ ಮಾಸ್ಕ್‌ಗಳ ಖರೀದಿಸಲಾಗಿದೆ. ಪ್ರತಿ ಮಾಸ್ಕ್ ಬೆಲೆ 50-60 ರೂ. ಇದ್ದರೆ ಸರ್ಕಾರ ಒಂದು ಮಾಸ್ಕ್‌ಗೆ 126-150 ರೂ. ನೀಡಿ ಖರೀದಿಸಿದೆ.

ಥರ್ಮಲ್ ಸ್ಕ್ಯಾನರ್:
ಮಾರುಕಟ್ಟೆ ಬೆಲೆ 1,500 -2,000 ರೂ. ಇದ್ದರೆ ಸರ್ಕಾರ 5,945 ರೂ. ನೀಡಿ ಖರೀದಿ ಮಾಡಿದೆ.

ಸ್ಯಾನಿಟೈಸರ್:
ಮಾರುಕಟ್ಟೆಯಲ್ಲಿ ಅರ್ಧ ಲೀಟರ್‌ಗೆ 80-100 ರೂ. ಇದ್ದರೆ ಸರ್ಕಾರ 200ರೂ. ನೀಡಿ ಖರೀದಿಸಿದೆ. ಸಮಾಜ ಕಲ್ಯಾಣ ಇಲಾಖೆ 600ರೂ. ನೀಡಿ ಖರೀದಿಸಿದೆ.

Click to comment

Leave a Reply

Your email address will not be published. Required fields are marked *