-ಖುದ್ದು ರೋಗಿಯಿಂದ ವಿಡಿಯೋ
ಬೆಂಗಳೂರು: ರಾಜ್ಯದ ಪ್ರತಿಷ್ಠಿಯ ಕೋವಿಡ್-19 ಆಸ್ಪತ್ರೆಯ ಅವ್ಯವಸ್ಥೆಯ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕು ಶಂಕಿತ ರೋಗಿ ವಿಡಿಯೋ ಮಾಡಿ ಅಲ್ಲಿಯ ಕರಾಳ ಮುಖವನ್ನು ಅನಾವರಣ ಮಾಡಿದ್ದಾರೆ.
Advertisement
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯನ್ನು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಆದ್ರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿ ದಿಲೀಪ್ ಕುಮಾರ್ ಎಂಬವರು ಇಲ್ಲಿ ಕೊರೊನಾದಿಂದ ಸಾಯಲ್ಲ. ಬದಲಾಗಿ ಹಸಿವಿನಿಂದ ಸಾಯುವಂತಾಗಿದೆ ಎಂದು ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾರೆ. ದಿಲೀಪ್ ಎರಡು ದಿನಗಳ ಹಿಂದೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ವಿಡಿಯೋವನ್ನು ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪನವರಿಗೂ ಟ್ಯಾಗ್ ಮಾಡಿದ್ದರು.
Advertisement
Advertisement
ದಿಲೀಪ್ ಹೇಳಿದ್ದೇನು?
ನನ್ನ ಹೆಸರು ದಿಲೀಪ್ ಕುಮಾರ್. ನಿನ್ನೆ ನಾನು ಉಸಿರಾಟದ ತೊಂದರೆಯಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಚೆಕಪ್ ಮಾಡಿಸಿಕೊಳ್ಳಲು ಬಂದೆ. ಎಕ್ಸ್ ರೇ, ರಕ್ತ ಪರೀಕ್ಷೆ, ಇಸಿಜಿ ಮಾಡಿಸಿ, ಬಳಿಕ ಚಿಕಿತ್ಸೆ ನೀಡೋದಾಗಿ ಹೇಳಿದರು. ಎಲ್ಲವನ್ನೂ ಮಾಡಿಸಿದೆ. ನಿನ್ನ ಜೊತೆ ಯಾರಾದ್ರೂ ಇದ್ದಾರಾ ಅಂತಾ ಕೇಳಿದ್ರು. ನಾನು ಬೆಂಗಳೂರಲ್ಲಿ ಒಬ್ಬನೇ ಇದ್ದೀನಿ. ನನಗೆ ಇಲ್ಲಿ ಏನೂ ಗೊತ್ತಿಲ್ಲ ಎಂದೆ. 2ಸಾವಿರ ಡೆಪಾಸಿಟ್ ಮಾಡಲು ಹೇಳಿದರು. ಹಣ ಕಟ್ಟಿದೆ. ಕೊರೊನಾ ಟೆಸ್ಟ್ ಮಾಡಿಸಿ, ವಾರ್ಡ್ಗೆ ಶಿಫ್ಟ್ ಮಾಡಿದರು. ಉಸಿರಾಟಕ್ಕೆ ಆಕ್ಸಿಜನ್ ಹಾಕಿದ್ರು. ಬಳಿಕ 12.30 ಕ್ಕೆ ಊಟ ಕೊಟ್ಟರು. ಮತ್ತೆ ರಾತ್ರಿ ಊಟ ಸಿಗಲ್ಲ ಅಂದ್ರು. ರಾತ್ರಿ ಊಟ ಕೊಡ್ತಿದ್ದಾರೆ ಅಂತಾ ಎಲ್ಲರೂ ಹೋದ್ರು. ನಾನು ಹೋದೆ, ಪಾತ್ರೆ ಕೊಡಿ ಅಂದ್ರು ನನ್ನ ಬಳಿ ಇಲ್ಲ ಎಂದೆ. ತಟ್ಟೆ ಇಲ್ಲ ಅಂದ್ರೆ ಊಟ ಕೊಡಲ್ಲ ಅಂದ್ರು. ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ಉತ್ತಮ ಅನಿಸ್ತು. ದಯಮಾಡಿ ಉಸಿರಾಟದ ತೊಂದರೆ ಸರಿಯಾದ ಮೇಲೆ ನನ್ನನ್ನು ಊರಿಗೆ ಕಳುಹಿಸಿ ಎಂದು ದಿಲೀಪ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸದ್ಯ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ರೋಗಿಯ ಆರೋಗ್ಯದ ಸ್ಥಿತಿಯ ಬಗ್ಗೆ ಗಮನ ನೀಡುವಂತೆ ಡಿಐಪಿಆರ್ ಸೂಚನೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.