ದಾವಣಗೆರೆ: ಕೊರೊನಾ ಎಲ್ಲಿ ಯಾವಾಗ ಬರುತ್ತೋ ಗೊತ್ತಿಲ್ಲ. ಯಾರನ್ನೂ ನಂಬಲಾಗದು, ನನಗೂ ಇದ್ದರೂ ಇರಬಹುದು, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರದಿಂದಿರಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮದುವೆ ಸಮಾರಂಭದಲ್ಲಿ ಜನರಿಗೆ ಎಚ್ಚರಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಸರಳ ವಿವಾಹವಾಗುತ್ತಿತ್ತು. ಈ ವೇಳೆ ರೇಣುಕಾಚಾರ್ಯ ಭೇಟಿ ನೀಡಿ, ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಎಲ್ಲರೂ ಮಾಸ್ಕ್ ಧರಿಸಿ, ಇಲ್ಲದಿದ್ದರೆ ದಂಡ ಬೀಳುತ್ತದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಕ್ತಿ, ಕೊರೊನಾ ಬಂದ ಮೇಲೆ ನಾನು ಎಲ್ಲೂ ಹೋಗಿಲ್ಲ ಎಂದಿದ್ದಾನೆ. ನಾನು ಊರ ತುಂಬಾ ಓಡಾಡಿದ್ದೇನೆ. ಜಾಗೃತಿ ವಹಿಸಿ ಎಂದು ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ಅಲ್ಲದೆ ಸರಳ ವಿವಾಹವಾಗುತ್ತಿದ್ದ ಜೋಡಿಗೆ ರೇಣುಕಾಚಾರ್ಯ ಮಾಸ್ಕ್ ವಿತರಿಸಿದ್ದಾರೆ.
Advertisement
Advertisement
ಬರೀ ಫೇಸ್ಬುಕ್ ಲೈವ್ನಲ್ಲಿ ಇರ್ತಿರಾ ವ್ಯಕ್ತಿ ಪ್ರಶ್ನೆ:
ಇದೇ ವೇಳೆ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಮತ್ತೊಂದು ಪ್ರಸಂಗ ನಡೆದಿದ್ದು, ನೀವು ಬರೀ ಫೇಸ್ಬುಕ್ ಲೈವ್ ನಲ್ಲಿ ಇರ್ತಿರಾ, ನಮ್ಮೂರಿಗೆ ಬಂದೇ ಇಲ್ಲ ಎಂದು ಅವರದ್ದೇ ಕ್ಷೇತ್ರದ ವ್ಯಕ್ತಿ ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಏರು ಧ್ವನಿಯಲ್ಲೇ ಉತ್ತರಿಸಿದ ರೇಣುಕಾಚಾರ್ಯ, ಏಯ್ ನಿಮ್ಮೂರಿಗೆ ಬಂದಿದ್ದೇನೆ. ಕೊರೊನಾ ಬಗ್ಗೆ ಮನೆ ಮನೆಗೆ ಬಂದು ಜಾಗೃತಿ ಮೂಡಿಸಿದ್ದೇನೆ ಎಂದು ಹೇಳಿದ್ದಾರೆ.