Connect with us

Gadag

ಕೊರೊನಾ ಲೆಕ್ಕಿಸದೆ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ಜನ ಜಾತ್ರೆ

Published

on

– ಗೃಹ ಮಂಡಳಿ ಕಚೇರಿಯಲ್ಲಿ ಗಲಾಟೆ, ತಳ್ಳಾಟ, ನೂಕಾಟ

ಗದಗ: ಒಂದೆಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜಿಲ್ಲೆಯಲ್ಲಿ 174 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ಎಚ್ಚರಿಗೆ ವಹಿಸಿಲ್ಲ. ನೂರಾರು ಜರನ್ನು ಸೇರಿಸಿಕೊಂಡು ಹರಾಜು ಪ್ರಕ್ರಿಯೆ ಆರಂಭಿಸಿದ್ದಾರೆ. ಅದನ್ನೂ ಸಹ ಶಾಂತಿಯುತವಾಗಿ, ವ್ಯವಸ್ಥಿತವಾಗಿ ಮಾಡಿಲ್ಲ. ಗಲಾಟೆ, ಗದ್ದಲ, ತಳ್ಳಾಟ, ನೂಕಾಟದಿಂದ ಹರಾಜು ಪ್ರಕ್ರಿಯೆ ರದ್ದಾಗಿದೆ.

ನಗರದ ಮುಳಗುಂದ ರಸ್ತೆಯಲ್ಲಿರುವ ಕರ್ನಾಟಕ ಗೃಹಮಂಡಳಿ ಕಚೇರಿಯಲ್ಲಿ ಇಂದು 40 ಸೈಟ್ ಗಳ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜನ ಕಿಕ್ಕಿರಿದು ಸೇರಿದ್ದರು. ಕಚೇರಿಯ ತುಂಬೆಲ್ಲಾ ಜನಸ್ತೋಮ ನಿರ್ಮಾಣವಾಗಿತ್ತು. ಜಿಲ್ಲೆಯಲ್ಲಿ 174 ಸೋಂಕಿತರಿದ್ರೂ ಜನ ಮಾತ್ರ ಭಯಭೀತರಾಗಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ಇದ್ಯಾವುದು ಇಲ್ಲದೆ ಜನ ಗುಂಪಾಗಿ ಸೇರಿದ್ದರು.

ಪ್ರತಿ ಚದರ ಅಡಿಗೆ 560 ರೂ. ನಿಂದ ಹರಾಜು ಶುರುವಾಗಲಿದ್ದು, ಓರ್ವ ಫಲಾನುಭವಿ ಮೊದಲು 50 ಸಾವಿರ ರೂಪಾಯಿ ಹಣ ಪಾವತಿಸಿ ಹೆಸರು ನೋಂದಣಿ ಮಾಡಿ ಟೊಕನ್ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ಆದೇಶ ಮಾಡಿದ್ದರು. ಆದರೆ 40 ಸೈಟ್‍ಗೆ ಸುಮಾರು 400 ಜನ ಸೇರಿದ್ದರು.

ಗೃಹ ಮಂಡಳಿ ನಿಯಮಗಳನ್ನು ಹೇಳುತ್ತಿದ್ದಂತೆ ಜನ ಸಿಟ್ಟಿಗೆದ್ದು, ಮಂಡಳಿ ನೀಡಿದ ನಿವೇಶನದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಧಿಕಾರಿಗಳು ಕಂಡು ಕಾಣದ ಹಾಗೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಮೊದಲು ನಿವೇಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಮಾಡಿಕೊಟ್ಟು, 40 ಸೈಟ್ ಹರಾಜು ಪ್ರಕ್ರಿಯೆ ಆರಂಭಿಸಿ ಎಂದು ಗದ್ದಲ, ಗಲಾಟೆ ಮಾಡಿದರು.

ಈ ವೇಳೆ ಸಾರ್ವಜನಿಕರು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ನಂತರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಸ್ಥಿತಿ ತಿಳಿಗೊಳಿಸಿದರು. ಹರಾಜು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹೇಳಿದರು. ವ್ಯವಸ್ಥಿತವಾಗಿ ಹರಾಜು ಪ್ರಕ್ರಿಯೆ ನಡೆಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಜನ ದೂರಿದ್ದಾರೆ.

Click to comment

Leave a Reply

Your email address will not be published. Required fields are marked *