CoronaDistrictsKarnatakaLatestMain PostRaichur

ಕೊರೊನಾ ಲಾಕ್ ಡೌನ್ ಸಂಕಷ್ಟ- ಕೋಟ್ಯಂತರ ರೂ. ನಷ್ಟದಲ್ಲಿರುವ ಭತ್ತ ಬೆಳೆದ ರೈತರು

ರಾಯಚೂರು: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿರುವುದು ಜಿಲ್ಲೆಯ ರೈತರನ್ನು ಕಂಗೆಡಿಸಿದೆ. ಅದರಲ್ಲೂ ಭತ್ತ ಬೆಳೆದ ರೈತರು ಕೋಟ್ಯಂತರ ರೂಪಾಯಿ ನಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಕೈಹಿಡಿಯಬೇಕಾದ ಸರ್ಕಾರ ನಾನಾ ನಿಯಮಗಳ ಹೆಸರಲ್ಲಿ ಕೈಚೆಲ್ಲಿದೆ.

ಕೃಷ್ಣಾ, ತುಂಗಭದ್ರೆಯನ್ನು ನಂಬಿ ಭತ್ತ ಬೆಳೆಯುವ ಜಿಲ್ಲೆಯ ಸಾವಿರಾರು ರೈತರ ಹಣೆಬರಹ ಈ ವರ್ಷವೂ ಚೆನ್ನಾಗಿಲ್ಲ. ಕಳೆದ ವರ್ಷ ಅತಿಯಾದ ಮಳೆ, ಚಂಡಮಾರುತ, ಪ್ರವಾಹದಿಂದ ಬೆಳೆ ಕೈಕೊಟ್ಟಿತ್ತು. ಈ ವರ್ಷ ಉತ್ತಮ ಬೆಳೆ ಕೈಗೆ ಬಂದಿದ್ದರು ಖರೀದಿಯಾಗದೆ ಜಮೀನಿನಲ್ಲೆ ಸಂಗ್ರಹಿಸಿಟ್ಟ ಭತ್ತ ಒಂದು ಅಡಿಯಷ್ಟು ಮೊಳಕೆಯೊಡೆದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಒಂದೆಡೆ ಕೊರೊನಾ ಹಿನ್ನೆಲೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತವಾಗಿದೆ. ಇನ್ನೊಂದೆಡೆ ಚಂಡಮಾರುತದ ಪ್ರಭಾವದಿಂದ ಆಗಾಗ ಮಳೆ ಸುರಿಯುತ್ತಿದ್ದು ಭತ್ತ ಹಾಳಾಗುತ್ತಿದೆ. ರೈಸ್ ಮಿಲ್‍ಗಳು ಸಹ ಖರೀದಿಯನ್ನು ಮುಂದುವೆರಿಸಿಲ್ಲ. ಕನಿಷ್ಠ ಬೆಂಬಲ ಬೆಲೆಯು ಭತ್ತ ಖರೀದಿ ಕೇಂದ್ರದಿಂದ ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.ಇದನ್ನೂ ಓದಿ. ರಾಯಚೂರಿನ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ- ಆರೈಕೆ ಕೇಂದ್ರಕ್ಕೆ ಬರಲೊಪ್ಪದ ಜನ

ಮೇ 1 ರಿಂದ 5 ರ ವರೆಗೆ ಮಾತ್ರ ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಅವಕಾಶ ನೀಡಲಾಗಿತ್ತು, ನೋಂದಣಿಯಾಗಿರುವ ಸುಮಾರು 250 ರೈತರ ಭತ್ತವನ್ನು ಸಮರ್ಪಕವಾಗಿ ಖರೀದಿ ಮಾಡುತ್ತಿಲ್ಲ. ಭತ್ತವನ್ನು ತಿಕ್ಕಿ ನೋಡುತ್ತಾರೆ ನುಚ್ಚಾದರೆ ಖರೀದಿಸುತ್ತಿಲ್ಲ. ಹೊರಗಡೆ ಮೊದಲು ಕ್ವಿಂಟಾಲ್‍ಗೆ 1200 ರೂಪಾಯಿ ಇತ್ತು. ಈಗ 1000 ರೂಪಾಯಿಗೂ ಕೇಳುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಆದರೆ ಅಧಿಕಾರಿಗಳು ಮಾತ್ರ ಭತ್ತ ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸಲು ರೈತರೇ ಮುಂದೆ ಬರುತ್ತಿಲ್ಲ, ನೋಂದಣಿಯಾದ 750 ಜನರ ಭತ್ತ ಪರಿಶೀಲಿಸಿ ಖರೀದಿಸುತ್ತೇವೆ ಎನ್ನುತ್ತಿದ್ದಾರೆ. ಕ್ವಿಂಟಾಲ್ ಗೆ 1868 ರೂ ಹಾಗೂ 1888 ರೂ. ಬೆಂಬಲ ಬೆಲೆ ಘೋಷಿಸಿರುವ ಸರ್ಕಾರ ಶೇ.15 ತೇವಾಂಶವಿರುವ ಭತ್ತ ಖರೀದಿಸದಂತೆ ಸೂಚಿಸಿದೆ. ಆದರೆ ಬಹುತೇಕ ರೈತರ ಭತ್ತ ಮಳೆಗೆ ಒದ್ದೆಯಾಗಿ ಮೊಳಕೆ ಬಂದಿದೆ. ಇನ್ನೂ ಮೇ 30 ಕ್ಕೆ ಭತ್ತ ಖರೀದಿಯೂ ಮುಗಿದು ಹೋಗುತ್ತದೆ. ಹೀಗಾಗಿ ಭತ್ತ ಬೆಳೆದ ರೈತರು ಸಂಪೂರ್ಣ ನಷ್ಟದ ಹಾದಿಯಲ್ಲಿದ್ದಾರೆ. ಅಧಿಕಾರಿಗಳು ಮಾತ್ರ ಸರ್ಕಾರದ ನಿರ್ದೇಶನ ಪಾಲಿಸುತ್ತೇವೆ ಎನ್ನುತ್ತಿದ್ದಾರೆ.

ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ಜಿಲ್ಲೆಯ ರೈತರು ಸಂಪೂರ್ಣ ನಷ್ಟದಲ್ಲಿದ್ದಾರೆ. ಎಕರೆಗೆ ಖರ್ಚು ಮಾಡಿದ ಹಣದಲ್ಲಿ ಅರ್ಧದಷ್ಟಾದರೂ ಮರಳಿ ಬಂದರೆ ಸಾಕು ಎನ್ನುವಂತ ಸುಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಭತ್ತ ಬೆಳೆದ ರೈತರ ಸಂಕಷ್ಟದ ಪರಿಸ್ಥಿತಿಗೆ ಸ್ಪಂದಿಸಬೇಕಾಗಿದೆ.

Leave a Reply

Your email address will not be published.

Back to top button