ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸಾಮೂಹಿಕ ಪ್ರಾರ್ಥನೆ, ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶ ಹೊರಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಸಾಮೂಹಿಕ ಪಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ರಂಜಾನ್ ಹಿನ್ನೆಲೆಯಲ್ಲಿ ಮೇ 24 ಮತ್ತು 25ರಂದು ವಿಶೇಷ ಪ್ರಾರ್ಥನೆ ಮಾಡಬೇಕಾಗುತ್ತದೆ. ಹೀಗಾಗಿ ಇಡೀ ಮುಸ್ಲಿಂ ಸಮುದಾಯದ ಪರವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ರಂಜಾನ್ ದಿನ ಈದ್ಗಾ ಮೈದಾನದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಬೆಳಗ್ಗಿನಿಂದ ಮಧ್ಯಾಹ್ನ 1 ಗಂಟೆ ವರೆಗೆ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಸಿಎಂ ಇಬ್ರಾಹಿಂ ಪತ್ರದಲ್ಲಿ ತಿಳಿಸಿದ್ದಾರೆ.
Advertisement
Advertisement
ಸಿಎಂ ಇಬ್ರಾಹಿಂ ಅವರ ಪತ್ರಕ್ಕೆ ಕಾಂಗ್ರೆಸ್ನ ಮುಸ್ಲಿಂ ನಾಯಕರಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಪತ್ರ ಬರೆದಿದ್ದನ್ನ ವಾಪಸ್ ಪಡೆಯಲು ಸೂಚಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
Advertisement
“ಜನ ಪ್ರತಿನಿಧಿಗಳಾಗಿ ಜವಾಬ್ದಾರಿ ಸ್ಥಾನದಲ್ಲಿರುವವರೇ ನಿಯಮವನ್ನ ಮೀರಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಿ ಎಂದು ಪತ್ರ ಬರೆದಿದ್ದು ಸರಿಯಲ್ಲ. ಮೊದಲೇ ತಬ್ಲಿಘಿ ಸಮಸ್ಯೆಯಿಂದ ಸಮುದಾಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. ಈಗ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ ಅಂತ ಪತ್ರ ಬರೆದು ಇನ್ನೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದು ಸರಿಯಲ್ಲ” ಎಂದು ಮುಸ್ಲಿಂ ನಾಯಕರು ಸಿಎಂ ಇಬ್ರಾಹಿಂ ವಿರುದ್ಧ ಕಿಡಿಕಾರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
Advertisement
“ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳೆಲ್ಲಾ ಮುಚ್ಚಿರುವಾಗ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ ಎಂದು ಪತ್ರ ಬರೆದಿದ್ದು ಸರಿಯಲ್ಲ. ಧಾರ್ಮಿಕ ನಾಯಕರು ಯಾರಾದರು ಕೇಳಿದ್ದರೆ ಅಥವಾ ಪತ್ರ ಬರೆದಿದ್ದರೆ ಬೇರೆ ಮಾತು. ಒಬ್ಬ ರಾಜಕೀಯ ನಾಯಕನಾಗಿ ಹೀಗೆ ಪತ್ರ ಬರೆದು ವಿವಾದ ಮಾಡಿಕೊಂಡಿದ್ದಾರೆ. ಬಿಜೆಪಿಯವರ ಕೈಗೆ ಇವರೇ ವಿವಾದದ ಅಸ್ತ್ರ ಕೊಟ್ಟಿದ್ದಾರೆ” ಎಂದು ಮುಸ್ಲಿಂ ನಾಯಕರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.