– ದಿಢೀರ್ ಭೇಟಿ ಬಳಿಕ ಸುಧಾಕರ್ ಹೇಳಿದ್ದೇನು..?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಾರ್ಭಟ ಮುಂದುವರಿದ್ದು, ಖಾಸಗಿ ಆಸ್ಪತ್ರೆಗಳು ಇದರ ಲಾಭ ಪಡೆಯಲು ಮುಂದಾದ್ವಾ ಎಂಬ ಪ್ರಶ್ನೆಯೊಂದು ಮೂಡಿದೆ.
ಹೌದು. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ಫುಲ್ ಆಗಿವೆಯಾ..? ಡಿಮ್ಯಾಂಡ್ ಸೃಷ್ಟಿ ಮಾಡಲು ಬೆಡ್ ಕೊರತೆಯ ನಾಟಕ ಆಡ್ತಿವೆಯಾ..?, ಜನರಲ್ಲಿ ಸೋಂಕು ಭೀತಿ ಹುಟ್ಟಿಸಲು ಬೆಡ್ ಫುಲ್ ಅಂತಾ ಕಥೆ ಕಟ್ಟುತ್ತಿವೆಯಾ ಎಂಬ ಪ್ರಶ್ನೆ ಮೂಡಿದ್ದು, ಖಾಸಗಿ ಆಸ್ಪತ್ರೆಗಳ ದರ್ಬಾರ್ ಸ್ಟೋರಿಯನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.
Advertisement
Advertisement
ಬೆಂಗಳೂರು ಬೆಡ್ ಎಮರ್ಜೆನ್ಸಿ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರು ಖಾಸಗಿ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸಡನ್ ವಿಸಿಟ್ ಕೊಟ್ಟಿರುವ ಸಚಿವರು, ಕೊರೋನಾ ಬೆಡ್ ಮೀಸಲಿನ ರಿಪೋರ್ಟ್ ಕೇಳಿದ್ದಾರೆ. ಎಷ್ಟು ಬೆಡ್ ಫುಲ್ ಆಗಿದೆ. ಎಷ್ಟು ಬೆಡ್ ಖಾಲಿ ಆಗಿದೆ ಹೇಳಿ ಎಂದು ಸಚಿವರು ಕೇಳಿದ್ದಾರೆ.
Advertisement
ವಿಪರ್ಯಾಸ ಅಂದರೆ ಸಚಿವರ ಒಂದೇ ಒಂದು ಪ್ರಶ್ನೆಗೂ ಆಸ್ಪತ್ರೆ ಸಿಬ್ಬಂದಿ ಉತ್ತರ ನೀಡಿಲ್ಲ. ಸುಮಾರು 1 ಗಂಟೆ ಕಾದರೂ ಉತ್ತರ ಸಿಗದಿದ್ದರಿಂದ ಸಚಿವರು ಸಿಬ್ಬಂದಿ ವಿರುದ್ಧ ಕೆಂಡಾಮಂಡಲರಾದರು. ಆದರೂ ಸಿಬ್ಬಂದಿ ಮಾತ್ರ ಡೋಂಟ್ ಕೇರ್ ಎಂದಿದ್ದಾರೆ. ಇದರಿಂದ ಬೇಸತ್ತ ಸಚಿವರು ಇದೇ ಲಾಸ್ಟ್ ವಾರ್ನಿಂಗ್.. ಎಂದು ಎಚ್ಚರಿಕೆ ಕೊಟ್ಟರು.
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ನಾನು ಹಠಾತ್ ಭೇಟಿ ಮಾಡಿದ್ದೀನಿ. ಹಿರಿಯ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸುತ್ತಿದ್ದೇವೆ. ಹಠಾತ್ ಭೇಟಿ ಆದ ಕಾರಣ ಆಸ್ಪತ್ರೆ ಆಡಳಿತದಿಂದ ಸ್ಪಷ್ಟ ಉತ್ತರ ಸಿಗಲಿಲ್ಲ. ಆಸ್ಪತ್ರೆಯಲ್ಲಿ 148 ಹಾಸಿಗಳು ಇದೆ, 74 ಬೆಡ್ ಸರ್ಕಾರಕ್ಕೆ ಕೊಡಬೇಕು. ಸರ್ಕಾರದಿಂದ ಕೊಡುವ ಚಿಕಿತ್ಸೆ ಉಚಿತವಾಗಿರುತ್ತೆ. ಒಟ್ಟಾರೆ 51 ಬೆಡ್ ಈ ಆಸ್ಪತ್ರೆಯಲ್ಲಿ ನೀಡಲಾಗಿದೆ. ಒಟ್ಟು 12 ಹಾಸಿಗೆಗಳು ಮಿಸ್ ಆಗಿದೆ. ಮುಂದಿನ ದಿನಗಳಲ್ಲಿ ಹೀಗಾಗ ಬಾರದು ಎಂದು ಹೇಳಲಾಗಿದೆ ಎಂದರು.
ಖಾಸಗಿ ಆಸ್ಪತ್ರೆ ವತಿಯಿಂದ ಶೇಕಡಾ 50 ರಷ್ಟು ಬೆಡ್ ಗಳು ನೀಡಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಹಾಸಿಗೆಗಳ ಅಗತ್ಯವಿದೆ. 3 ಸ್ಟಾರ್, 5 ಸ್ಟಾರ್ ಹೋಟೆಲ್ ಗಳು ತಾತ್ಕಾಲಿಕ ಆಸ್ಪತ್ರೆ ಆಗಿ ಕಾರ್ಯ ನಿರ್ವಹಿಸಬೇಕು. ಈ ಬಗ್ಗೆ ತಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ರೆಮ್ಡಿಸಿವಿರ್ ಸಾಕಷ್ಟು ದಾಸ್ತಾನು ಇದೆ. 80 ಸಾವಿರ ವಯಲ್ಸ್ ಗೆ ಬೇಡಿಕೆ ಇಡಲಾಗಿದೆ. ಸದ್ಯ ಸರ್ಕಾರದ ಬಳಿ 35 ಸಾವಿರ ವಯಲ್ಸ್ ಲಭ್ಯವಿದೆ. ವಿರೋಧ ಪಕ್ಷದವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಆದರೆ ನಾನು ಎಲ್ಲವನ್ನು ರಚನಾತ್ಮಕವಾಗಿ ಸ್ವೀಕಾರ ಮಾಡುತ್ತೀನಿ. ಆರೋಗ್ಯ ಸಚಿವನಾಗಿ ಎಲ್ಲದನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತೇನೆ. ಚಿತಾಗಾರದಲ್ಲಿ ಇಂದು ಒಂದೇ ಸಮ 14 ಮೃತ ಸೋಂಕಿತರ ದೇಹಗಳು ಬಂದಿವೆ. ಹೀಗಾಗಿ ಅಲ್ಲಿ ಸಮಸ್ಯೆ ಉದ್ಭವಿಸಿದೆ ಎಂದು ತಿಳಿಸಿದರು.
ಚಿತಾಗಾರ ಬಳಿಯ ದೃಶ್ಯ ಕಂಡು ಮನಸ್ಸಿಗೆ ನೋವುಂಟಾಗಿದೆ. ಸೋಂಕು ಅತಿ ವೇಗವಾಗಿ ಹರಡುತ್ತಿದೆ ಇದನ್ನು ಒಪ್ಪುತ್ತೀನಿ. ಆದರೆ ಹಳೆ ವೈರಸ್ ನಷ್ಟು ತೀವ್ರವಾಗಿಲ್ಲ. 0.44 ಸಾವಿನ ಪ್ರಮಾಣ ಇದೆ, ಸಂಖ್ಯೆ ಆಧರಿಸಿ ತೀರ್ಮಾನ ಮಾಡಬೇಡಿ. ಡಿಸ್ಚಾರ್ಜ್ ಸಮ್ಮರಿಗೆ ಒಂದು ಪದ್ಧತಿ ಇದೆ, ಪ್ರೊಟೊಕಾಲ್ ಇದೆ. ಆದ್ರೆ ವಿದ್ಯಾವಂತರು ಇದನ್ನು ಲೆಕ್ಕಿಸದೇ ಆಸ್ಪತ್ರೆಯಿಂದ ಬಿಡುಗಡೆ ಆಗ್ತಿದ್ದಾರೆ ಎಂದು ಹೇಳಿದರು.
ಕೋವಿಡ್ ದೊಡ್ಡ ರಾಕೆಟ್ ಸೈನ್ಸ್ ಅಲ್ಲ. ಹೆಚ್ಚಿಗೆ ಸ್ಪ್ರೆಡ್ ಆಗ್ತಿರೋದ್ರಿಂದ ಆತಂಕ ಹುಟ್ಟಿಸುತ್ತಿದೆ. ರಾತ್ರಿ ಕರ್ಫ್ಯೂ ಹಾಕಿರೋದು ಕೊರೊನಾ ಹೊರಟು ಹೋಗುತ್ತದೆ ಎಂಬ ಭ್ರಮೆಯಿಂದ ಅಲ್ಲ. ಜಾಗೃತಿ ಹುಟ್ಟಿಸಲು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.