ನವದೆಹಲಿ: ಕಳೆದ ಏಳು ತಿಂಗಳಿಂದ ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಕೊರೊನಾ ಭೀತಿ ನಡುವೆ ಗೊತ್ತೇ ಆಗದಂತೆ ಮತ್ತಷ್ಟು ಭಯಾನಕ ರೋಗಗಳು ಮನುಕುಲವನ್ನು ಬಾಧಿಸಲು ಆರಂಭಿಸಿವೆ. ಇದಕ್ಕ ಸ್ಪಷ್ಟ ಉದಾಹರಣೆ ಕ್ಯಾನ್ಸರ್.
ಕ್ಯಾನ್ಸರ್ ಸದ್ದಿಲ್ಲದೆ ಹಲವರನ್ನು ಬಲಿ ಪಡೆಯುತ್ತಿದ್ದು, ಈ ಕುರಿತು ಐಸಿಎಂಆರ್ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿ ಭಾರತದ ಯುವಕರು, ಮಹಿಳೆಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕ್ಯಾನ್ಸರ್ ಕೇವಲ ಮಧ್ಯಮ ವಯಸ್ಕರು ಹಾಗೂ ವೃದ್ಧರಲ್ಲಿ ಮಾತ್ರವಲ್ಲ ಯುವಕರಲ್ಲೂ ಹೆಚ್ಚು ಕಾಣಿಸಿಕೊಳ್ಳುತ್ತಿದೆ.
Advertisement
Advertisement
ವೇಗವಾಗಿ ಹೆಚ್ಚುತ್ತಿವೆ ಕ್ಯಾನ್ಸರ್ ಪ್ರಕರಣಗಳು
ಭಾರತದಲ್ಲಿ ಕೊರೊನಾ ಮಧ್ಯೆ ಕ್ಯಾನ್ಸರ್ ಕೂಡ ವೇಗವಾಗಿ ಹೆಚ್ಚುತ್ತಿದೆ. ಐಸಿಎಂಆರ್ ಬಿಡುಗಡೆ ಮಾಡಿರುವ ವರದಿ ಇಂತಹದ್ದೊಂದು ಆಘಾತದ ಸುದ್ದಿಯನ್ನು ಹೇಳಿದ್ದು, 2025 ರ ವೇಳೆಗೆ ಭಾರತದಲ್ಲಿ 16 ಲಕ್ಷಕ್ಕೂ ಅಧಿಕ ಮಂದಿ ಕ್ಯಾನ್ಸರ್ ಗೆ ತುತ್ತಾಗಲಿದ್ದಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
Advertisement
ಐಸಿಎಂಆರ್ ನೀಡಿರುವ ವರದಿ ಪ್ರಕಾರ ದೆಹಲಿ, ಮುಂಬೈ, ಬೆಂಗಳೂರು, ಅಹ್ಮದಾಬಾದ್ ಹಾಗೂ ಕೊಲ್ಕತ್ತಾದಂತಹ ದೊಡ್ಡ ನಗರಗಳಲ್ಲಿ ಹೆಚ್ಚು ಜನ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದು, ಇದರಲ್ಲಿ ಯುವಕರು ಮತ್ತು ಮಧ್ಯ ವಯಸ್ಕ ಮಹಿಳೆಯರು ಹೆಚ್ಚು ಎಂದು ವರದಿ ಉಲ್ಲೇಖಿಸಿದೆ.
Advertisement
ಯಾವ್ಯಾವ ಕ್ಯಾನ್ಸರ್, ಹೇಗೆ ಹರಡುತ್ತಿದೆ?
ಭಾರತದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತಿದ್ದು, ಪೂರ್ವ ರಾಜ್ಯಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್, ಮೆದುಳು, ತಲೆ ಮತ್ತು ಕುತ್ತಿಗೆ ಬಳಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಹೆಚ್ಚಿದೆ. ಅತಿಯಾದ ತಂಬಾಕು ಸೇವನೆ ಮತ್ತು ಸೌದೆ ಒಲೆ ಬಳಕೆ ಇದಕ್ಕೆ ಕಾರಣ. ಮಧ್ಯ ಪ್ರದೇಶದ ಯುವಕರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಂಡಿದ್ದು, ಇದಕ್ಕೆ ತಂಬಾಕು, ಪಾನ್ ಮಸಾಲ ಕಾರಣ ಎಂದು ವರದಿ ಹೇಳಿದೆ.
ಗಂಗಾ ನದಿ ತಟದಲ್ಲಿರುವ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಪಿತ್ತ ಕೋಶದ ಕ್ಯಾನ್ಸರ್ ಹೆಚ್ಚಾಗಿದ್ದು, ಇದರ ಜೊತೆಗೆ ತಲೆ ಮತ್ತು ಕುತ್ತಿಗೆ ಸಂಬಂಧಿಸಿದ ಕ್ಯಾನ್ಸರ್ ಬಂದಿದೆ. ಇದಕ್ಕೆ ಜಲ ಮಾಲಿನ್ಯ, ಪ್ರೊಟಿನ್ ರಹಿತ ಆಹಾರ ಪದ್ಧತಿ, ಶುಚಿತ್ವ ಸಮಸ್ಯೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮೂತ್ರ ಕೋಶದ ಕ್ಯಾನ್ಸರ್ ಹೆಚ್ಚಿದ್ದು, ಗಾಳಿ ಮತ್ತು ಜಲ ಮಾಲಿನ್ಯ ಕಾರಣವಂತೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಉದರ ಸಂಬಂಧಿ ಕ್ಯಾನ್ಸರ್ ಪ್ರಮಾಣ ಹೆಚ್ಚಿದ್ದು, ಆಹಾರದಲ್ಲಿ ಮಸಾಲೆ ಪದಾರ್ಥಗಳ ಹೆಚ್ಚು ಸೇವನೆ ಕ್ಯಾನ್ಸರ್ಗೆ ಕಾರಣವಾಗಿದೆ. ಪಂಜಾಬ್ ನಲ್ಲಿ ಕಿಡ್ನಿ, ಮೂತ್ರ ಕೋಶ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಿದೆ. ಗುಜರಾತ್, ರಾಜಸ್ಥಾನದಲ್ಲಿ ಕತ್ತು, ತಲೆ ಕ್ಯಾನ್ಸರ್ ಪ್ರಮಾಣ ಅಧಿಕವಾಗಿದ್ದು ಇದಕ್ಕೆ ವಾತಾವರಣದಲ್ಲಿನ ಮಾಲಿನ್ಯ, ಆಹಾರದಲ್ಲಿ ಕೀಟ ನಾಶಕದ ಪ್ರಮಾಣ ಹೆಚ್ಚಿರುವುದು ಕಾರಣ. ದೆಹಲಿ, ಮುಂಬೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಧಿಕವಾಗಿದ್ದು, ಇದಕ್ಕೆ ವಾಯು ಮಾಲಿನ್ಯ ಕಾರಣವಾಗಿದೆ ಎನ್ನಲಾಗಿದೆ.
ಸುಮಾರು 20-25 ವರ್ಷದ ಯುವಕರಲ್ಲಿ ಕ್ಯಾನ್ಸರ್ ಹೆಚ್ಚಿದ್ದರೆ, ಒಟ್ಟು ಕ್ಯಾನ್ಸರ್ ಪ್ರಕರಣಗಳ ಪೈಕಿ ಪಾನ್ ಮಸಾಲಗೆ ಸಂಬಂಧಿಸಿದ್ದೇ ಶೇ.40ರಷ್ಟಿದೆ. ಸ್ತನ ಕ್ಯಾನ್ಸರ್ 2025 ರ ವೇಳೆಗೆ 4,27,273 ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದಂತೆ ಇದು ಒಟ್ಟು ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ.14 ರಷ್ಟಾಗಿದ್ದು, ಉಳಿದ ಶೇ.46ರಷ್ಟು ಕ್ಯಾನ್ಸರ್ ಇತರೆ ಭಾಗಗಳಿಗೆ ಸಂಬಂಧಿಸಿದ್ದು ಎಂದು ವರದಿ ಹೇಳಿದೆ.
ಕ್ಯಾನ್ಸರ್ ರೋಗಿಗಳ ಪೈಕಿ ಆರಂಭದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಮಾತ್ರ ಜೀವ ಹಾನಿ ತಪ್ಪಿಸಬಹದಿದ್ದು, ಸ್ವಲ್ಪ ಯಾಮಾರಿದರೂ ರೋಗಿಯ ಸಾವು ಖಚಿತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಕೊರೊನಾಗಿಂತ ಕ್ಯಾನ್ಸರ್ ಅಪಾಯ ಎಂದು ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.