-ಅಭಿಷೇಕ, ಗಿಡನೆಟ್ಟು ಶ್ರೀಗಳ ನೆನಪು ಬಿಚ್ಚಿಟ್ಟ ಭಕ್ತರು
ಉಡುಪಿ: ವೃಂದಾವಸ್ಥರಾದ ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಎರಡನೇ ಪುಣ್ಯಸ್ಮರಣೆ ರಾಜ್ಯದ ಅಲ್ಲಲ್ಲಿ ನಡೆದಿದೆ. ಕೋವಿಡ್-19 ಆತಂಕ ಮತ್ತು ಭಾನುವಾರ ಲಾಕ್‍ಡೌನ್ ಇರುವುದರಿಂದ ತಮ್ಮ ಮನೆ ಮಠಗಳಲ್ಲೇ ಭಕ್ತರು, ಪೂರ್ವಾಶ್ರಮದವರು ಪುಣ್ಯಸ್ಮರಣೆ ಮಾಡಿದ್ದಾರೆ.
ಕೇಮಾರು ಶ್ರೀ ಸಾಂದಿಪನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ತಮ್ಮ ಮಠದಲ್ಲಿ ಶ್ರೀ ವರದ ನಾರಾಯಣ, ಮೂಕಾಂಬಿಕಾ, ಹಾಗೂ ಶಾಲಗ್ರಾಮ ಸನ್ನಿಧಿಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ಸಲ್ಲಿಸಿದರು. ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಸಾಂದೀಪನಿ ಮಠಾಧೀಶ ಈಶ ವಿಠಲ ದಾಸ ಸ್ವಾಮೀಜಿ, ಶ್ರೀಗಳು ಅಗಲಿ ಎರಡು ವರ್ಷ ಸಂದಿದೆ. ಕೊರೊನಾ ಕಾಲದಲ್ಲಿ ನಾವಿದ್ದೇವೆ. ಸ್ವಾಮೀಜಿ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಹೃದಯವಂತರಾಗಿದ್ದರು. ಅವರು ಈ ಕಾಲದಲ್ಲಿ ಇದ್ದಿದ್ದರೆ ಕೊರೊನಾ ಸಂಕಷ್ಟಕ್ಕೆ ನಿರಂತರ ಸ್ಪಂದಿಸುತ್ತಿದ್ದರು. ಸರ್ಕಾರದ ನಿರ್ಬಂಧ ಇರುವುದರಿಂದ ಈ ಬಾರಿ ಸರಳ ಸ್ಮರಣೆ ನಡೆಸಿದ್ದೇವೆ ಎಂದು ಹೇಳಿದರು.
ಬೈಂದೂರು ತಾಲೂಕು ಕಿರಿ ಮಂಜೇಶ್ವರದ ಹೊಸಹಿತ್ಲು ಸಮುದ್ರ ಕಿನಾರೆಯಲ್ಲಿ ಶ್ರೀರಾಮ ಭಜನಾ ಮಂದಿರದ ವತಿಯಿಂದ ಸ್ಮರಣಾ ಕಾರ್ಯಕ್ರಮ ನಡೆಯಿತು. ಶಿರೂರು ಶ್ರೀಪಾದರ ನೆನಪಿನಲ್ಲಿ ಗಿಡ ನೆಟ್ಟರು. ನಮ್ಮ ಸಂಸ್ಥೆಗೆ ಶ್ರೀಗಳು ಮಾಡಿರುವ ಸಹಾಯದ ಬಗ್ಗೆ ಸದಸ್ಯರು ನೆನಪಿಸಿಕೊಂಡರು. ಉಡುಪಿಯ ಪರಿಯಾಳ ಸಮುದಾಯ, ಶ್ರೀಗಳ ಭಕ್ತ ಬೆಂಗಳೂರಿನ ಶ್ರೀಕೃಷ್ಣ ಟೂರ್ಸ್ ಆಂಡ್ ಟ್ರಾವೆಲ್ಸ್ ನ ಶ್ರೀನವೀನ್ ಮನೆಯಲ್ಲಿ, ಶ್ರೀ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರರು ಮತ್ತು ಬಂಧುಗಳು ತಮ್ಮ ಮನೆ ವಠಾರದಲ್ಲಿ ಶ್ರೀಪಾದರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ನಡೆಸಿ ಪುಣ್ಯಸ್ಮರಣೆಗೈದರು.
ಪೂರ್ವಾಶ್ರಮದ ಸಹೋದರ ಬಿ. ವಾದಿರಾಜ ಆಚಾರ್ಯ, ಮತ್ತು ಲಾತವ್ಯ ಆಚಾರ್ಯ ಮಾತನಾಡಿ ಮನೆಯಲ್ಲೇ ಶ್ರೀಗಳಿಗೆ ನುಡಿನಮನ ಸಲ್ಲಿಸಿದ್ದೇವೆ. ಶ್ರೀಗಳು ಮುಖ್ಯಪ್ರಾಣ ದೇವರ ಭಕ್ತ. ವೃಂದಾವನಕ್ಕೆ ಮುಖ್ಯಪ್ರಾಣ ದೇವರ ತೀರ್ಥ ಪ್ರತಿದಿನ ಅರ್ಪಣೆಯಾಗುತ್ತಿದೆ. ಪೂರ್ವಾಶ್ರಮ ಸಹೋದರರು.. ಕುಟುಂಬಸ್ಥರು ಮನೆಯಲ್ಲೇ ಪುಷ್ಪಾಂಜಲಿ ಅರ್ಪಣೆ ಮಾಡಿದ್ದೇವೆ ಎಂದರು.