– ಕೊರಗಜ್ಜನೇ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದ ಭಕ್ತರು
ಮಂಗಳೂರು: ತುಳುವರ ಆರಾಧ್ಯ ದೈವ ಸ್ವಾಮಿ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಗೂ ನಿಂದನಾರ್ಹ ಬರಹಗಳನ್ನು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಮಂಗಳೂರು ಸಮೀಪದ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲದ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶ್ರೀಕೊರಗಜ್ಜ, ಗುಳಿಗಜ್ಜ ಸೇವಾ ಸಮಿತಿ ಕ್ಷೇತ್ರದಲ್ಲಿರುವ ಕಾಣಿಕೆ ಹುಂಡಿಯಲ್ಲಿ ಇಂದು ಮುಂಜಾನೆ ಈ ವಿಕೃತಿ ಪತ್ತೆಯಾಗಿದೆ. ಈ ಕ್ಷೇತ್ರದಲ್ಲಿ ಪ್ರತೀ ಸಂಕ್ರಮಣದಂದು ಕಾಣಿಕೆ ಹುಂಡಿಯ ಹಣ ಎಣಿಕೆ ಕಾರ್ಯ ನಡೆಯುತ್ತದೆ. ಈ ಬಾರಿ ಮಾತ್ರ ತಡವಾಗಿ ಕಾಣಿಕೆಹುಂಡಿಯನ್ನು ಎಣಿಕೆಗೆ ತೆಗೆಯಲಾಗಿದೆ.
Advertisement
Advertisement
ಎಣಿಕೆಯ ವೇಳೆ ಕಾಂಡೋಮ್‌ಗಳು ಹಾಗೂ ಸಿಎಂ ಬಿಬಿಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಭಾವ ಚಿತ್ರಗಳನ್ನು ವಿರೋಪಗೊಳಿಸಿ,ಅವಹೇಳನಕಾರಿ ಬರಹಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಬಳಕೆ ಮಾಡಿದ ಎರಡು ಕಾಂಡೋಮ್ ಹಾಕಿದ್ದ ಕಿಡಿಗೇಡಿಗಳು ಅದರ ಜೊತೆಗೆ ಬೆಂಗಳೂರಿನ ಕೆ.ಆರ್. ಐಡಿಯಲ್ ನಿಗಮಾಧ್ಯಕ್ಷರಾದ ಎಂ ರುದ್ರೇಶ್ ಅವರಿಗೆ ಶುಭಕೋರಿದ ಒಂದು ಪೋಸ್ಟರ್ ಹಾಕಿದ್ದಾರೆ. ಪೋಸ್ಟರ್‌ನಲ್ಲಿರುವ ಸಿಎಂ ಬಿಎಸ್‌ವೈ, ಅವರ ಪುತ್ರ ವಿಜಯೇಂದ್ರ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರ ಫೋಟೋವನ್ನು ವಿರೂಪಗೊಳಿಸಲಾಗಿದೆ.
Advertisement
ಇದೇ ಪೋಸ್ಟರ್ ನಲ್ಲಿ ”ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು, ದೇವ ಲೋಕದಿಂದ ಹೊರ ಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂ ಲೋಕದ ಜನರನ್ನು ಭ್ರಷ್ಟರನ್ನಾಗಿಸಿ, ನಕಲಿ ದೇವರಾಗಿ ಅನಾಧಿಕಾಲದಿಂದ ಮೆರೆಯಲ್ಪಡುತ್ತಿದೆ. ಎಚ್ಚರ, ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ ಬಾಚಿ ತಿಂದು ತೇಗುವ ಈ ಅಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದ್ದು, ಜನರು ಸಿದ್ದರಾಗಬೇಕು” ಎಂದು ಪ್ರಚೋದನಕಾರಿಯಾಗಿ ಬರೆಯಲಾಗಿದೆ.
Advertisement
ಕಿಡಿಗೇಡಿಗಳ ಈ ಕೃತ್ಯದ ವಿರುದ್ಧ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕೊರಗಜ್ಜ, ಗುಳಿಗಜ್ಜನ ಸನ್ನಿಧಿಯಲ್ಲಿ ನೂರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು, ಈ ವಿಕೃತಿ ಮೆರೆದ ಕಿಡಿಗೇಡಿಗಳ ವಿರುದ್ದ ಕ್ಷೇತ್ರದ ಕಾರ್ಣಿಕ ಶಕ್ತಿಗಳಾದ ಗುಳಿಗಜ್ಜ ಮತ್ತು ಕೊರಗಜ್ಜ ಶಿಕ್ಷೆಸಬೇಕು ಎಂದು ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು.
ಕೆಲ ದಿನಗಳ ಹಿಂದೆ ಮಂಗಳೂರಿನ ಕೊಟ್ಟಾರದ ಬಬ್ಬುಸ್ವಾಮಿ ಹಾಗೂ ಅತ್ತಾವರದ ಬಾಬುಗುಡ್ಡೆಯ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯಲ್ಲಿ ಕೂಡಾ ಇದೇ ರೀತಿಯ ಅವಹೇಳನಕಾರಿ ಬರಹದ ಪತ್ರಗಳು ಪತ್ತೆಯಾಗಿದ್ದು, ಅದೇ ತಂಡ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.