Bengaluru CityKarnatakaLatestMain Post

ಕೊನೆಗೂ ಡಿಕೆಶಿ ಹಠಕ್ಕೆ ಮಣೆ ಹಾಕಿದ ಹೈಕಮಾಂಡ್

– ಒಂದು ವರ್ಷ ರಕ್ಷಾ ರಾಮಯ್ಯ
– 2 ವರ್ಷ ನಲಪಾಡ್‍ಗೆ ಪಟ್ಟ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಠಕ್ಕೆ ಹೈಕಮಾಂಡ್ ಕೊನೆಗೂ ಮಣೆ ಹಾಕಿದೆ. 2022ರ ಜನವರಿ 31 ರವರೆಗೆ ಮಾತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 2022 ರ ಜನವರಿ 31ರಿಂದ ಮೊಹಮ್ಮದ್ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ. ರಕ್ಷಾ ರಾಮಯ್ಯಗೆ ಒಟ್ಟು 1 ವರ್ಷ ಅಧಿಕಾರ, ನಲಪಾಡ್ ಅವರಿಗೆ 2 ವರ್ಷ ಅಧ್ಯಕ್ಷ ಸ್ಥಾನ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ರಿಂದ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಡಿಕೆಶಿ ಬಣದ ಪ್ರತಿಷ್ಠೆಯ ಕದನದಲ್ಲಿ ಗಲಾಟೆಗೆ ಹೈ ಕಮಾಂಡ್ ಬ್ರೇಕ್ ಹಾಕಿತ್ತು. ನಲಪಾಡ್‍ರನ್ನು ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಲು ಮುಂದಾಗಿದ್ದ ಡಿಕೆಶಿಗೆ ಹೈಕಮಾಂಡ್ ಸೂಚನೆಯಿಂದ ಹಿನ್ನಡೆಯಾಗಿತ್ತು. ಎಲ್ಲ ತಣ್ಣಗಾಯ್ತು ಎನ್ನುವಷ್ಟರಲ್ಲಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿ ತಮ್ಮ ಶಿಷ್ಯ ನಲಪಾಡ್‍ಗೆ ಮುಂದಿನ 2 ವರ್ಷದ ಅಧ್ಯಕ್ಷ ಗಾದಿ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯಗೆ ಇನ್ನು 7 ತಿಂಗಳುಗಳ ಕಾಲವಷ್ಟೇ ಅಧ್ಯಕ್ಷರಾಗಿ ಅಧಿಕಾರ ಮುಂದುವರಿಯಲಿದ್ದಾರೆ. ಈ ಬೆಳವಣಿಗೆ ನಂತರ ಅಧ್ಯಕ್ಷನಾಗಿ ಮುಂದಿನ 2 ವರ್ಷದ ಅಧಿಕಾರ ಸಿಗುವುದು ಖಚಿತವಾಗಿತ್ತಿದ್ದಂತೆ ಸಿದ್ದರಾಮಯ್ಯ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಲು ನಲಪಾಡ್ ತೆರಳಿದರು. ಈ ವೇಳೆ ಹಾರ ತುರಾಯಿ ತಂದ ನಲಪಾಡ್‍ಗೆ ಮುಜುಗರ ಆಗುವಂತ ಪ್ರಸಂಗ ನಡೆಯಿತು. ಹಾರ ಹಾಕಲು ಹೋದ ನಲಪಾಡ್‍ಗೆ ಸಿದ್ದರಾಮಯ್ಯ ಹಾರ ಬೇಡ ಎಂದರು. ಪೇಟ ಹಾಕಲು ಮುಂದಾಗಿತ್ತಿದ್ದಂತೆ ಪೇಟವು ಬೇಡ ಎಂದರು. ಅದೆಲ್ಲ ಬೇಡ ಎಂದು ಶಾಲು ಮಾತ್ರ ಸ್ವೀಕರಿಸಿದರು. ಇದಕ್ಕೂ ಮುನ್ನ ನಾನೇನು ಮಾಡಿದ್ದೆನಪ್ಪ ನಿನಗೆ ಎಂದು ಸಿದ್ದರಾಮಯ್ಯ ಅವರು ನಲಪಡ್‍ಗೆ ಪ್ರಶ್ನಿಸಿದರು. ಆ ಬಳಿಕ ಕ್ಯಾಮೆರಾ ನೋಡಿ ಹಾಗೆ ಸುಮ್ಮನಾದರು. ಇದನ್ನೂ ಓದಿ: ಹಗಲು ಹೊಡೆದು ರಾತ್ರಿ ರಾಜಿ ಮಾಡ್ಕೊಂಡ ನಲಪಾಡ್

ಅಧಿಕಾರ ಸಿಗುವುದು ಖಚಿತವಾಗುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ನಲಪಾಡ್, ಪಕ್ಷ ಯಾವುದೇ ಅಧಿಕಾರ ಕರ್ತವ್ಯ ಕೊಟ್ಟರೂ ನಿರ್ವಹಿಸುತ್ತೇನೆ. ಐವೈಸಿ ನನಗೆ ಈಗ ಅಧಿಕಾರ ನೀಡಿದೆ. ಕಾಂಗ್ರೆಸ್ ನನ್ನ ತಾಯಿ ಇದ್ದಂತೆ. ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಯುವಕರನ್ನು ಕಾಂಗ್ರೆಸ್ ಬಳಿ ಸೇರಿಸಲು ಈ ಯುವ ಕಾಂಗ್ರಸ್ ಹುದ್ದೆ ಬೇಕಿದೆ. ಪಕ್ಷ ನನ್ನ ಕೆಲಸ ನೋಡಿ ಪಕ್ಷ ಕಟ್ಟುವ ಕೆಲಸ ನೀಡಿದೆ. ನಾನು ಇದನ್ನು ನಿಭಾಯಿಸಿಕೊಂಡು ಹೋಗುವೆ. ಈಗ ಅಧ್ಯಕ್ಷ ಸ್ಥಾನ ನೀಡಿರುವುದು ಖುಷಿ ತಂದಿದೆ. ತಂದೆ, ತಾಯಿ, ಡಿಕೆಶಿ, ಸಿದ್ದರಾಮಯ್ಯ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತೇನೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಎಲ್ಲರನ್ನೂ ಜೊತೆಗೂಡಿ ಒಟ್ಟಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published.

Back to top button